ಮಾದಕ ಮುಕ್ತ ಮಂಗಳೂರು ಎನ್ನುವ ಹೆಸರು ತರುವಲ್ಲಿ ರಾತ್ರಿ ಹಗಲೆನ್ನದೇ ಕಾರ್ಯಚರಣೆ, ದಾಳಿ ನಡೆಸಿ ಮಾದಕ ಮಟ್ಟ ಹಾಕುತ್ತಿದ್ದ ಖಡಕ್ ಅಧಿಕಾರಿಯ ದಿಢೀರ್ ವರ್ಗಾವಣೆ ಸದ್ಯ ನಾಗರಿಕ ಸಮಾಜದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಡ್ರಗ್ ಅನ್ನು ಮೂಲದಿಂದ ತಡೆಯಲು ಪಣ ತೊಟ್ಟಿದ್ದ ಅವರು ಡೇರಿಂಗ್ ನಿರ್ಧಾರ ಕೈಗೊಂಡಿದ್ದರು.
ಕಳೆದ ಬಾರಿ ನಿಷ್ಠಾವಂತ ಅಧಿಕಾರಿ ಎನಿಸಿಕೊಂಡಿದ್ದ ಶಶಿಕುಮಾರ್ ವರ್ಗಾವಣೆಯ ಬಳಿಕ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಫೆಬ್ರವರಿ 23 ರಂದು ಅಧಿಕಾರ ವಹಿಸಿಕೊಂಡಿದ್ದ ಕುಲ್ ದೀಪ್ ಕುಮಾರ್ ಜೈನ್ ನಗರದಲ್ಲಿ ಮಾದಕ ಮುಕ್ತ ಅಭಿಯಾನ ಕೈಗೊಂಡಿದ್ದರು. ಅನೈತಿಕ ಪೊಲೀಸ್ ಗಿರಿ, ಅಕ್ರಮ ಮರಳು ಸಾಗಾಟ, ಮಸಾಜ್ ಪಾರ್ಲರ್ ಹೀಗೇ ನಗರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿದ್ದ ಕೀರ್ತಿ ಕುಲ್ ದೀಪ್ ಕುಮಾರ್ ಅವರಿಗೆ ಸಲ್ಲುತ್ತದೆ.
ಕಳೆದ ಫೆಬ್ರವರಿ 23 ರಂದು ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಕುಲದೀಪ್ ಕುಮಾರ್ ಜೈನ್ ಅವರು ಮಾದಕ ಪದಾರ್ಥಗಳ ವಿರುದ್ಧ ಜೀರೋ ಟಾಲರೆನ್ಸ್ ತೋರ್ಪಡಿಸಿದ್ದರು. ತನ್ನ ನೇರ ನಿಷ್ಠುರ ನಡೆ ನುಡಿಯಿಂದ ಗಮನ ಸೆಳೆದಿದ್ದರು. ಡ್ರಗ್ಸ್ ವಿರೋಧಿ ಕಾರ್ಯಾಚರಣೆಗಾಗಿಯಂತೂ ಅವರು ಬಲಾಢ್ಯ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ಎದುರು ಹಾಕಿಕೊಂಡಿದ್ದರು. ಕರಾವಳಿಯ ಬಸ್ ಮಾಫಿಯಾಕ್ಕೂ ಸಡ್ದು ಹೊಡೆದಿದ್ದರು. ಅಂದ ಹಾಗೆ, ಇಷ್ಟೊಂದು ಸಣ್ಣ ಅವಧಿಯಲ್ಲಿ ಹೀಗೆಲ್ಲ ಪವರ್ ತೋರಿಸಿದರೆ ಯಾವ ಕೊಬ್ಬಿದ ಸಂಸ್ಥೆಗಳಿಗೆ, ಅದನ್ನು ಬೆಂಬಲಿಸಿಕೊಂಡು ಬಂದಂತಹಾ ರಾಜಕಾರಣಿಗಳಿಗೆ ದಶದಿಕ್ಕುಗಳಿಂದ ಉರಿಯೋದು ಪಕ್ಕಾ. ಹಾಗೆ ಉರಿದ ಪರಿಣಾಮ ಈಗಿರುವ ಕಮಿಷನರ್ ಬದಲಾಗಿದ್ದಾರೆ. ಆದರೆ ಹೋಗುವಾಗ ಒಳ್ಳೆಯ ಹೆಸರು ಪ್ಯಾಕ್ ಮಾಡಿಕೊಂಡೇ ಹೋಗುತ್ತಿದ್ದಾರೆ. .
ನಗರದ ಪ್ರಸಿದ್ಧ ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟ ಪೊಲೀಸ್ ಇಲಾಖೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದ ಹಲವಾರು ಯುವಕ-ಯುವತಿಯರನ್ನು ವಶಕ್ಕೆ ಪಡೆದು ಹಲವು ಪ್ರಕರಣಗಳನ್ನು ದಾಖಲಿಸಿ ಸೂಕ್ತ ತನಿಖೆ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಇಡೀ ಡ್ರಗ್ಸ್ ಜಾಲ ಬಲೆಗೆ ಬಿದ್ದಿತ್ತು.ಮಂಗಳೂರು ಮಾತ್ರವಲ್ಲದೇ, ನಗರವನ್ನು ಮುತ್ತಿಕೊಂಡಿದ್ದ ಡ್ರಗ್ಸ್ ಜಾಲದ ಆಳ ಅರಿತು ಬೆಂಗಳೂರಿನಿಂದ ಪ್ರಮುಖ ಆರೋಪಿಗಳನ್ನು ದಸ್ತಗಿರಿ ಮಾಡಿಕೊಂಡು ಬೆಂಡೆತ್ತಿದ್ದರು. ಡ್ರಗ್ಸ್ ಗೆ ಸಂಬಂಧಿಸಿದ ಈಗಾಗಲೇ ನೂರಕ್ಕಿಂತಲೂ ಅಧಿಕ ಮಾರಾಟಗಾರರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎನ್ನುವ ಮಾಹಿತಿಯಿದೆ. 300 ಕ್ಕಿಂತಲೂ ಅಧಿಕ ಮಂದಿಯ ಮೇಲೆ ಕೇಸು ದಾಖಲಾಗಿದೆ. ಮತ್ತು 1 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೀಗೇ ನಗರದಲ್ಲಿ ಮಾದಕ ಎಂಟ್ರಿಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದ ಅಧಿಕಾರಿಯ ದಿಢೀರ್ ವರ್ಗಾವಣೆ ನಾಗರಿಕ ಸಮಾಜದಲ್ಲಿ ಆತಂಕ ಸೃಷ್ಟಿಸಿದ್ದು, ಒಂದು ರೀತಿಯಲ್ಲಿ ಹತೋಟಿಗೆ ಬಂದಿದ್ದ ಡ್ರಗ್ಸ್ ಮಾಫಿಯ ಇನ್ನೆಲ್ಲಿ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತದೆಯೋ ಎನ್ನುವ ಆತಂಕ ಸದ್ಯ ನಗರದಲ್ಲಿ ಮನೆಮಾಡಿದೆ.
