Chennai: ನಮ್ಮ ಅರಿವಿಗೆ ಬಾರದೆ ಅದೆಷ್ಟೋ ಬಾರಿ ನಾವು ಮೋಸ ಹೋಗುತ್ತೇವೆ.ನಾವು ಖರೀದಿ ಮಾಡುವ ದೈನಂದಿನ ವಸ್ತುಗಳು ಇಲ್ಲವೇ ಇನ್ನಿತರ ಸಾಮಗ್ರಿಗಳು ಸರಿಯಾದ ಗುಣಮಟ್ಟ ಹೊಂದಿರದೆ ಬೇರಾವುದೋ ಕಳಪೆ ಗುಣಮಟ್ಟ ಹೊಂದಿರುವುದು. ಈ ರೀತಿ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಕೇವಲ ಒಂದೇ ಒಂದು ಬಿಸ್ಕೆಟ್’ಗಾಗಿ 1 ಲಕ್ಷ ರೂ. ತೆತ್ತ ಕಂಪೆನಿ ಅಷ್ಟಕ್ಕೂ ಆದ ಯಡವಟ್ಟೇನು ಗೊತ್ತಾ?
ತಮಿಳುನಾಡಿನ (Tamilnadu)ಚೆನ್ನೈನಲ್ಲಿ (Chennai)ಬಿಸ್ಕೆಟ್ ಪ್ಯಾಕೆಟ್ನಲ್ಲಿ (Biscut)ಒಂದು ಬಿಸ್ಕೆಟ್ ಕಡಿಮೆ ಇದ್ದ ಹಿನ್ನೆಲೆ ಐಟಿಸಿ ಕಂಪನಿಯು(ITC Company)1 ಲಕ್ಷ ರೂಪಾಯಿ ಗ್ರಾಹಕನಿಗೆ ಪರಿಹಾರವಾಗಿ ನೀಡಬೇಕಾಗಿ ಬಂದ ಘಟನೆ ವರದಿಯಾಗಿದೆ. ಚೆನ್ನೈನ ನಿವಾಸಿ ಮಾಥುರ್ ಕೆಪಿ ದಿಲಿಬಾಬು ಬೀದಿ ನಾಯಿಗಳಿಗೆ ಆಹಾರ ನೀಡುವ ಸಲುವಾಗಿ ಡಿಸೆಂಬರ್ 2021ರಲ್ಲಿ ಮನಾಲಿಯ ಸಾಮಾನ್ಯ ಅಂಗಡಿಯಿಂದ ಸನ್ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ಗಳ ಡಜನ್ ಪ್ಯಾಕೆಟ್ಗಳನ್ನು ಖರೀದಿ ಮಾಡಿದ್ದರಂತೆ. ಪ್ಯಾಕೆಟ್ ಮೇಲೆ 16 ಬಿಸ್ಕೆಟ್ ಗಳಿವೆ ಎಂದು ನಮೂದಿಸಲಾಗಿದ್ದರು ಕೂಡ ವಾಸ್ತವವಾಗಿ ಅದರಲ್ಲಿ 15 ಬಿಸ್ಕೆಟ್ಗಳಿತ್ತಂತೆ. ಈ ಬಗ್ಗೆ ದಿಲಿಬಾಬು ಐಟಿಸಿಯಿಂದ ವಿವರಣೆ ಕೇಳಿದ್ದು ಅವರಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ದಿಲಿಬಾಬು, ಒಂದು ಬಿಸ್ಕೆಟ್ ಬೆಲೆ 75 ಪೈಸೆ ಐಟಿಸಿ ಲಿಮಿಟೆಡ್ ಒಂದು ದಿನದಲ್ಲಿ ಸುಮಾರು 50 ಲಕ್ಷ ಪ್ಯಾಕ್ಗಳನ್ನು ತಯಾರಿಕೆ ಮಾಡುತ್ತದೆ. ಅಂದರೆ ಪ್ರತಿನಿತ್ಯ ಜನರಿಗೆ 29 ಲಕ್ಷ ರೂಪಾಯಿ ವಂಚನೆಯಾಗುತ್ತಿದೆ ಎಂದು ಗ್ರಾಹಕ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.ಈ ಪ್ರಕರಣದ ಕುರಿತಂತೆ ಕಂಪನಿಯು ತನ್ನ ಪರವನ್ನು ಮಂಡಿಸಿದ್ದು, ದಿಲಿಬಾಬು ಖರೀದಿ ಮಾಡಿದ ಉತ್ಪನ್ನವನ್ನು ತೂಕದ ಆಧಾರದ ಮೇಲೆ ಮಾರಾಟ ಮಾಡಲಾಗಿದ್ದು, ಜಾಹೀರಾತಿನಲ್ಲಿರುವ (Advertisement)ಬಿಸ್ಕೆಟ್ ತೂಕ 76 ಗ್ರಾಂ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯ ಹಕ್ಕನ್ನು ಕೂಡ ಗ್ರಾಹಕ ಹಕ್ಕುಗಳ ಆಯೋಗವು ತನಿಖೆ ನಡೆಸಿದೆ. ಆದರೆ ಈ ವಾದದಲ್ಲಿ ಹುರುಳಿಲ್ಲ ಎಂಬುದನ್ನು ಮನಗಂಡ ಗ್ರಾಹಕ ಆಯೋಗ ಇದರ ಜೊತೆಗೆ ಈ 15 ಬಿಸ್ಕತ್ತುಗಳ ತೂಕವು 74 ಗ್ರಾಂ.ಇರುವುದನ್ನು ಕೂಡ ಪರಿಗಣಿಸಿದೆ.
2011ರ ಕಾನೂನಿನ ಅನುಸಾರ, ಪ್ಯಾಕ್ ಮಾಡಿದ ಸರಕುಗಳ ತೂಕವು ಸ್ವಲ್ಪ ಬದಲಾಗಬಹುದು. 4.5 ಗ್ರಾಂ ತೂಕದ ವ್ಯತ್ಯಾಸವನ್ನು ಅನುಮತಿ ನೀಡಲಾಗಿದೆ ಎಂದು ಕಂಪನಿಯ ವಕೀಲರು ಹೇಳಿಕೊಂಡಿದ್ದರು. ಇದನ್ನು ಗ್ರಾಹಕ ಆಯೋಗವು ತಿರಸ್ಕರಿಸಿದ್ದು, ಈ ರೀತಿಯ ರಿಯಾಯಿತಿಯು ಕೆಲವು ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿದೆ. ಇದು ಬಿಸ್ಕತ್ನಂತಹ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ ಎಂದು ಗ್ರಾಹಕ ಆಯೋಗ ತಿಳಿಸಿದ್ದು, ಗ್ರಾಹಕರಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಆದೇಶ ಹೊರಡಿಸಿದೆ
