Hariyana: ಕೆಲವರಿಗೆ ಬಂಪರ್ ಲಾಟರಿ (Lottery) ಹೊಡೆದು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ ಸಾವಿರಾರು ಉದಾಹರಣೆ ನಾವು ಕೇಳಿದ್ದೇವೆ. ಅಂತೆಯೇ ಇಲ್ಲೊಬ್ಬನಿಗೆ ಬಂಪರ್ ಅದೃಷ್ಟ ಒದಗಿಬಂದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.
ಹೌದು, ಹರಿಯಾಣದ (Hariyana) ರೈತರೊಬ್ಬನ ಖಾತೆಗೆ ಬರೋಬ್ಬರಿ 200 ಕೋಟಿ ರೂ. ಬಂದು ಬಿದ್ದಿದೆ. ಆದ್ರೆ ಜೀವನದಲ್ಲಿ ಲೆಕ್ಕಕ್ಕಿಂತ ಹೆಚ್ಚು ಹಣ ಇದ್ರೆ ರಿಸ್ಕ್ ಕಟ್ಟಿಟ್ಟ ಬುತ್ತಿ ಅನ್ನೋದು ಈತನಿಗೆ ಖಾತ್ರಿ ಆಗಿತ್ತು. ಅಂತೆಯೇ ತನ್ನ ಖಾತೆಯಲ್ಲಿ ಇಷ್ಟೊಂದು ಹಣ ಇರುವುದನ್ನು ಕಂಡು ಗಾಬರಿಯಾದ ರೈತ ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸದ್ಯ, ತನ್ನ ಖಾತೆಗೆ ಹಣ ಹೇಗೆ ಬಂತು ಮತ್ತು ಎಲ್ಲಿಂದ ಹಣ ವರ್ಗಾವಣೆಯಾಗಿದೆ ಎಂಬುದು ಖಚಿತವಾಗಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರೊಂದಿಗೆ ಗುರುವಾರ ರೈತ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಇದೇ ವೇಳೆ ತಮಗೆ ರಕ್ಷಣೆ ನೀಡಬೇಕು ಎಂದು ಕೂಡಾ ಕೋರಿಕೊಂಡಿದ್ದಾನೆ.
ಇದೀಗ ಈ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಪ್ರಕರಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಿಗೂಢ ಪ್ರಕರಣದ ಬಗ್ಗೆ ವಿಸ್ತಾರವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ಹರಿಯಾಣ ಪೊಲೀಸರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಬಧ್ರಾ ಪೊಲೀಸ್ ಠಾಣೆಯ ತನಿಖಾಧಿಕಾರಿ, ಸಹಾಯಕ ಸನ್-ಇನ್ಸ್ಪೆಕ್ಟರ್ ಆಫ್ ಪೊಲೀಸ್ (ಎಎಸ್ಐ) ವಿಶಾಲ್ ಕುಮಾರ್ ಪ್ರಕಾರ, ರೈತ ವಿಕ್ರಮ್ ಮತ್ತು ಆತನ ಕುಟುಂಬದವರು ದೂರು ದಾಖಲಿಸಿದ್ದು, ಪ್ರಕರಣ ವಿವರಗಳನ್ನು ಪರಿಶೀಲಿಸಲು ನಾವು ಶುಕ್ರವಾರ ಬ್ಯಾಂಕ್ಗೆ ಭೇಟಿ ನೀಡುತ್ತೇವೆ ಮತ್ತು ನಮ್ಮ ತನಿಖೆಯನ್ನು ಮುಂದುವರಿಸುತ್ತೇವೆ. ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ. ಈ ಹಣ ಯಾರದ್ದು, ಎಲ್ಲಿಂದ ಬಂತು, ಮೂಲ ಏನು ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುತ್ತೇವೆ. ನಾವು ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಪಡೆದಾಗ ಮಾತ್ರ ಎಷ್ಟು ಮೊತ್ತ ಆತನ ಪಾಸ್ ಬುಕ್ನಲ್ಲಿ ಇದೆ ಎಂದು ದೃಢೀಕರಿಸಬಹುದು. ಸಂಪೂರ್ಣ ಪರಿಶೀಲನೆ ಹಾಗೂ ತನಿಖೆ ಬಳಿಕ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
