ಮಹಿಳೆಯರು ಕಿರುಕುಳ ಹಾಗೂ ವಾಮಾಚಾರದ ಶಂಕೆಯಿಂದ ಯುವಕನೋರ್ವನನ್ನು ಹಲ್ಲೆ ಮಾಡಿ, ಶೂ ಗಳಿಂದ ಹಾರ ಹಾಕಿ ಗ್ರಾಮದ ಸುತ್ತಲೂ ಮೆರವಣಿಗೆ ಮಾಡಿದ ಘಟನೆಯೊಂದು ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ.
ಇಷ್ಟು ಮಾತ್ರವಲ್ಲದೆ, ಗ್ರಾಮಸ್ಥರು ಬಲವಂತವಾಗಿ ಯುವಕನಿಗೆ ಮೂತ್ರ ಕುಡಿಸಿದ್ದಾರೆ ಎಂದು ಯುವಕನ ಕುಟುಂಬಸ್ಥರು ದೂರು ದಾಖಲು ಮಾಡಿದ್ದು, ಈ ಬಗ್ಗೆ ಪೊಲೀಸರು ಖಚಿತ ಪಡಿಸಿಲ್ಲ. ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧನ ಮಾಡಿದ್ದಾರೆ.
ಈ ಘಟನೆ ಸೆ.4 ರಂದು ನಡೆದಿದ್ದು, ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಜಿಲ್ಲಾಧಿಕಾರಿ ತನಿಖೆ ಮಾಡಲು ಆದೇಶ ನೀಡಿದ್ದಾರೆ. ಯುವಕ ಸೆ.3 ರಂದು ರಕ್ಷಾಬಂಧನ ಇದ್ದುದರಿಂದ ತನ್ನ ಅತ್ತೆ ಮನೆಗೆ ಹೋಗಿದ್ದ ಎಂದು ಯುವಕನ ತಂದೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮನೆಗೆ ಬಂದ ಗ್ರಾಮಸ್ಥರು ಮಗನ ಬಗ್ಗೆ ವಿಚಾರಣೆ ಮಾಡಿದ್ದಾರೆ. ಮನೆಯಲಿಲ್ಲ ಎಂದು ಹೇಳಿದಾಗ ಹೋಗಿದ್ದಾರೆ.
ಸೆ.4 ರಂದು ಯುವಕ ಹಿಂತಿರುಗಿದ್ದು, ಗ್ರಾಮಸ್ಥರು ಆತನಿಗೆ ಥಳಿಸಿದ್ದು, ಶೂಗಳ ಹಾರ ಹಾಕಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಹಾಗೂ ಮೂತ್ರವನ್ನು ಕುಡಿಯುವಂತೆ ಮಹಿಳೆಯರು ಒತ್ತಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೆರವಣಿಗೆ ಎಲ್ಲಾ ಮಾಡಿದ ಮೇಲೆ ಯುವಕನನ್ನು ಗ್ರಾಮಸ್ಥರು ಸೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ಯುವಕ ವಾಮಾಚಾರ ಮಾಡುತ್ತಿರುವುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು, ಕಳೆದ ಎರಡ್ಮೂರು ತಿಂಗಳಿಂದ ಗ್ರಾಮದಲ್ಲಿ ಮಹಿಳೆಯರ ಒಳ ಉಡುಪು ಕಳವು ಬಗ್ಗೆ ಗ್ರಾಮಸ್ಥರು ದೂರಿದ್ದಾರೆ.
