CM Siddaramaiah: ದೇಶದ ರಾಜಕೀಯವು ಲೋಕಸಭಾ ಚುನಾವಣೆ ಎದುರಿಸಲು ಅಣಿಯಾಗುತ್ತಿದೆ. ಈ ನಡುವೆ ದೇಶಾದ್ಯಂತ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತರಲು ಚಿಂತಿಸುತ್ತಿದೆ ಎನ್ನಲಾದ ‘ಒಂದು ರಾಷ್ಟ್ರ, ಒಂದು ಚುನಾವಣೆ'(One nation, one election)ನೀತಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಇದರ ಕುರಿತು ಪರ-ವಿರೋಧದ ಚರ್ಚೆಗಳಾಗುತ್ತಿವೆ. ಈ ನಡುವೆಯೇ ಕರ್ನಾಟಕ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು(CM siddaramaiah)ಕೇಂದ್ರದ ಈ ಹೊಸ ನೀತಿಯ ಕುರಿತು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಹೌದು, ಮೈಸೂರಿನಲ್ಲಿ ಮಾತನಾಡುವಾಗ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ(BJP) ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶರಾಗಿದ್ದಾರೆ. ಹೀಗಾಗಿ ಹೊಸ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ಒಂದು ದೇಶ ಒಂದು ಚುನಾವಣೆ ಪ್ರಾಯೋಗಿಕವಾಗಿ ಅಸಾಧ್ಯ. ಇತ್ತೀಚೆಗಷ್ಟೆ ನಮ್ಮ ವಿಧಾನಸಭೆ ಚುನಾವಣೆ ಮುಗಿದಿದೆ. ಕೆಲವು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ವಿಧಾನಸಭಾ ಚುನಾವಣೆ ನಡೆದು ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಬರುತ್ತದೆ. ಆಗ ನಮ್ಮ ವಿಧಾನಸಭೆ ವಿಸರ್ಜಿಸಲಾಗುತ್ತದೆಯೇ, ಅದು ಸಾಧ್ಯವೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಈ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತ: ಸಾಧ್ಯವಿಲ್ಲ. ಕೆಲ ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿದೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಎಲ್ಲ ರಾಜ್ಯ ವಿಧಾನಸಭೆ ವಿಸರ್ಜಿಸಲು ಸಾಧ್ಯವಿದೆಯೇ? ಇಲ್ಲ ಚುನಾವಣೆ ನಡೆಯುವವರೆಗೂ ರಾಷ್ಟ್ರಪತಿ ಆಡಳಿತ ಹೇರಲು ಸಾಧ್ಯವಾ? ಎಂದು ಕೇಂದ್ರ ಸರ್ಕಾರವನ್ನು ಸಿಎಂ ಇಂದು ಪ್ರಶ್ನಿಸಿದ್ದಾರೆ.
ಅಲ್ಲದೆ ‘ನಾನು ಕರ್ನಾಟಕಕ್ಕೆ ಬಂದು ಮಾಯ-ಮಂತ್ರ ಮಾಡಿಬಿಡುತ್ತೇನೆ, ರ್ಯಾಲಿ, ರೋಡ್ ಶೋ ನಡೆಸಿದರೆ ಪರಿಸ್ಥಿತಿ ಬದಲಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಅವರು ಹೋದಲ್ಲೆಲ್ಲಾ ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಇದರಿಂದಾಗಿ ಪ್ರಧಾನಿಗೆ ಹತಾಶೆ ಶುರುವಾಗಿದೆ. ಹೀಗಾಗಿಯೇ ಅವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲೂ ಸಾಧ್ಯವಾಗಿಲ್ಲ. ಅದಕ್ಕೆ ಇಷ್ಟವೂ ಇಲ್ಲ. ಕರ್ನಾಟಕ ಬಿಜೆಪಿ ಬಗ್ಗೆ ಅವರಿಗೆ ತಾತ್ಸಾರ ಬಂದು ಬಿಟ್ಟಿದೆ’ ಎಂದು ವ್ಯಂಗ್ಯವಾಡಿದರು.
