Chips Challenge: ಚಾಲೆಂಜ್ ಎನ್ನುವುದು ಒಂದು ಕೆಟ್ಟ ನಶೆ ಆಗಿದೆ. ಒಂದು ಸಾರಿ ಕಮಿಟ್ ಆದರೆ ಕೆಲವರಿಗೆ ಅದರ ನಶೆ ಇಳಿಯುವ ವರೆಗೆ ಚಾಲೆಂಜ್ ಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ. ಆದರೆ ಚಾಲೆಂಜ್ ನೆಪದಲ್ಲಿ ಏನೇನೊ ಹುಚ್ಚು ಸಾಹಸ ಮಾಡಲು ಹೊರಟರೆ ಕೊನೆಗೆ ಅನಾಹುತ ಆಗುವುದು ಖಂಡಿತಾ. ಇದೀಗ ಅಮೆರಿಕಾ ಹುಡುಗನಿಗೂ ಅದೇ ಆಗಿದೆ. ಚಾಲೆಂಜ್ ಸ್ವೀಕರಿಸಿ ಇಹಲೋಕ ತ್ಯಜಿಸಿದ್ದಾನೆ.
ಅಮೆರಿಕಾದಲ್ಲಿ ಒನ್ ಚಿಪ್ಸ್ ಚಾಲೆಂಜ್ (Chips Challenge) ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವವರು ಖಾರದ ಮೆಣಸಿನಿಂದ ತಯಾರಿಸಿದ ಟೋರ್ಟಿಲ್ಲಾ ಚಿಪ್ಸನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ. ಈ ಚಿಪ್ಸ್ ತಿನ್ನುವ ವೇಳೆ ಬೇರೆ ಯಾವುದೇ ಆಹಾರ ಸೇವನೆ ಮಾಡುವಂತಿಲ್ಲ. ಚಿಪ್ಸ್ ತಿಂದ್ಮೇಲೆ ಅದ್ರ ವಿಡಿಯೋ ಹಾಕ್ಬೇಕು. #onechipchallenge ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ಬೇಕು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಆದ್ರೆ ಇದೇ ಒನ್ ಚಿಪ್ಸ್ ಚಾಲೆಂಜ್ ಹುಡುಗನೊಬ್ಬನ ಪ್ರಾಣ ತೆಗೆದಿದೆ. ಹೌದು, ಚಾಲೆಂಜ್ ನಲ್ಲಿ ಪಾಲ್ಗೊಂಡಿದ್ದ ದಿನವೇ ಹುಡುಗ ಸಾವನ್ನಪ್ಪಿದ್ದಾನೆ.

14 ವರ್ಷದ ಹ್ಯಾರಿಸ್ ವೊಲೊಬಾ (Harris Woloba) ಎಂಬಾತ, ಮ್ಯಾಸಚೂಸೆಟ್ಸ್‌ನ ವೋರ್ಸೆಸ್ಟರ್ ನಿವಾಸಿಯಾಗಿದ್ದು, ಈತ ಅತ್ಯಂತ ಮಸಾಲೆಯುಕ್ತ ಚಿಪ್ಸ್ ಚಾಲೆಂಜ್ನಲ್ಲಿ ಭಾಗಿಯಾಗಿದ್ದಾನೆ . ಚಾಲೆಂಜ್ ನಂತೆ ಹ್ಯಾರಿಸ್ ವೊಲೊಬಾ ಕೂಡ ಚಿಪ್ಸ್ ಸೇವನೆ ಮಾಡಿದ್ದಲ್ಲದೆ ಅದರ ವಿಡಿಯೋ ಮಾಡಿದ್ದಾನೆ.
ಹ್ಯಾರಿಸ್ ವೊಲೊಬಾ ತಾಯಿ ಪ್ರಕಾರ, ಹ್ಯಾರಿಸ್ ವೊಲೊಬಾ ಶಾಲೆಯಿಂದ ಕರೆ ಬಂದಿದೆ. ಸ್ನೇಹಿತ ನೀಡಿದ ಚಿಪ್ಸ್ ತಿಂದ ನಂತ್ರ ಹ್ಯಾರಿಸ್ ವೊಲೊಬಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಕುಟುಂಬಸ್ಥರು ಹ್ಯಾರಿಸ್ ವೊಲೊಬಾನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗ್ತಿದ್ದಂತೆ ಹ್ಯಾರಿಸ್ ವೊಲೊಬಾ ಸುಧಾರಿಸಿಕೊಂಡಿದ್ದಾನೆ. ಹಾಗಾಗಿ ಮನೆಗೆ ವಾಪಸ್ ಕರೆತರಲಾಗಿದೆ. ಮನೆಗೆ ಬಂದ ಕೆಲ ಸಮಯದ ನಂತ್ರ ಹ್ಯಾರಿಸ್ ವೊಲೊಬಾ ಉಸಿರಾಟ ತೊಂದರೆ ಅನುಭವಿಸಿದ್ದಾನೆ. ನಂತರ ಮೂರ್ಛೆ ಹೋದವನಿಗೆ ಪ್ರಜ್ಞೆ ಬರಲೇ ಇಲ್ಲ.
ಮೂಲತಃ ಹ್ಯಾರಿಸ್ ವೊಲೊಬಾ ಸೇವನೆ ಮಾಡಿದ ಪಾಕಿ ಚಿಪ್ಸನ್ನು ಪಾಕಿ ಕಂಪನಿ ತಯಾರಿಸುತ್ತದೆ. ವಿಶ್ವದ ಎರಡು ಮಸಾಲೆಯುಕ್ತ ಮೆಣಸುಗಳಾದ ಕೆರೊಲಿನಾ ರೀಪರ್ ಮತ್ತು ನಾಗಾ ವೈಪರ್‌ನೊಂದಿಗೆ ಟೋರ್ಟಿಲ್ಲಾ ಚಿಪ್ಸ್ ತಯಾರಿಸಲಾಗುತ್ತದೆ. ಈ ಚಿಪ್ಸ್ ಮೇಲೆಯೇ ಇದನ್ನು ಮಕ್ಕಳು ಸೇವನೆ ಮಾಡಬಾರದು ಎಂದು ಬರೆಯಲಾಗಿದೆ.
ಮುಖ್ಯವಾಗಿ ಗರ್ಭಿಣಿಯರು, ಅಲರ್ಜಿ ಸಮಸ್ಯೆ ಹೊಂದಿರುವವರು, ಮಸಾಲೆ ಸೇವನೆಯಿಂದ ಸಮಸ್ಯೆ ಅನುಭವಿಸುವವರು, ಈಗಾಗಲೇ ಅನಾರೋಗ್ಯಕ್ಕೆ ಒಳಗಾಗಿರುವವರು ಈ ಚಿಪ್ಸ್ ಸೇವನೆ ಮಾಡಬಾರದು ಎಂದು ಚಿಪ್ಸ್ ಕಂಪನಿ ಸೂಚನೆ ನೀಡಿದೆ.
ಈ ಚಿಪ್ಸ್ ಸೇವನೆ ಮಾಡಿದ ನಂತರ ಮೂರ್ಛೆ ಹೋಗುವುದು, ಹೊಟ್ಟೆ ನೋವು ಅಥವಾ ಉಸಿರಾಟದ ತೊಂದರೆ, ವಾಕರಿಕೆ ಕಾಡುವ ಸಾಧ್ಯತೆಯಿರುತ್ತದೆ. ಈ ಸಮಸ್ಯೆ ಕಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕೆಂದು ಚಿಪ್ಸ್ ಕಂಪನಿ ಸೂಚನೆ ನೀಡಿದೆ. ಆದರೂ ಈ ಚಾಲೆಂಜ್ ಸ್ವೀಕರಿಸಿ ಬಾಲಕನೊಬ್ಬ ಕೊನೆ ಉಸಿರು ಎಳೆದಿದ್ದಾನೆ.
ಇದನ್ನೂ ಓದಿ: ಮಲಗುವಾಗ ಮೊಬೈಲ್ ವಿಷಯದಲ್ಲಿ ನೀವು ಈ ತಪ್ಪು ಮಾಡುತ್ತೀರಾ ?! ಹಾಗಿದ್ರೆ ಎಚ್ಚರ.. !!
