Mangalore: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರವಾಸಿ ತಾಣವಾಗಲಿರುವ ಅಯೋಧ್ಯೆಯಲ್ಲಿ ಈಗಾಗಲೇ ಕರ ಸೇವೆಯ ಅವಕಾಶಕ್ಕಾಗಿ ಹಲವಾರು ಮಂದಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ಜಿಲ್ಲೆಯ ಸಸ್ಯ ಪ್ರೇಮಿಗೊಬ್ಬರ ಪ್ರಯತ್ನವೊಂದು ಯಶಸ್ವಿಯಾಗುವುದರೊಂದಿಗೆ ಅಯೋಧ್ಯೆ ಯಿಂದಲೇ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರು(Mangalore) ನಗರದ ಹೊರವಲಯದ ಕಿನ್ನಿಗೋಳಿ ಸಮೀಪದ ನಿಡ್ಡೋಡಿ ನಿವಾಸಿ ವಿನೇಶ್ ಪೂಜಾರಿ ಅವರು ಬೆಳೆದ ‘ನಾಗಲಿಂಗ’ ಪುಷ್ಪದ ಸಸಿಯೊಂದನ್ನು ರಾಮ ಜನ್ಮ ಭೂಮಿಗೆ ಕಳುಹಿಸಲಾಗಿದ್ದು, ಅಲ್ಲಿ ಸ್ವೀಕರಿಸಿದ್ದಾರೆ ಎನ್ನುವುದು ದೃಢವಾಗಿದ್ದು, ಅಲ್ಲಿನ ಮುಖ್ಯಸ್ಥರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಕಳೆದ ಒಂದೆರಡು ವರ್ಷಗಳಿಂದ ಅಪರೂಪದ, ಅಳಿವಿನಂಚಿನ ನಾಗಲಿಂಗ ಪುಷ್ಪದ ಸಸಿಯನ್ನು ಬೆಳೆಸಿ ಉಚಿತವಾಗಿ ವಿತರಿಸುತ್ತಿರುವ ವಿನೇಶ್, ಹಲವಾರು ಮಠ ಮಂದಿರಗಳಲ್ಲಿ ಖುದ್ದು ತಾನೇ ತೆರಳಿ ನೆಟ್ಟು, ಅದರ ಮಹತ್ವ ಹಾಗೂ ಹಿನ್ನೆಲೆಯ ಅರಿವು ಮೂಡಿಸುತ್ತಾ ಯುವ ಜನತೆಗೆ ಮಾದರಿಯಾಗಿದ್ದಾರೆ.

ಈ ಬಾರಿ ಬ್ಯಾಡಗಿ ಮೂಲದ ಕೃಷಿಕರೊಬ್ಬರು ಸುಮಾರು 150 ಕ್ಕೂ ಹೆಚ್ಚಿನ ಗಿಡಗಳನ್ನು ಪಡೆದುಕೊಂಡು ಹೋಗಿದ್ದು, ಅಲ್ಲಿನ ಕೆಲ ದೇವಾಲಯ, ಶಾಲೆ ಹಾಗೂ ಪ್ರಮುಖ ಸ್ಥಳಗಳಲ್ಲಿ ನೆಟ್ಟು ಬೆಳೆಸಲಾಗಿದೆ. ಅಂತೆಯೇ ಕಳೆದ 05 ರಂದು ಮಂಗಳೂರಿನಿಂದ ಅಯೋಧ್ಯೆ ಗೆ ಒಟ್ಟು ಎರಡು ಗಿಡಗಳನ್ನು ಕಳುಹಿಸಲಾಗಿದ್ದು, ಪಡೆದುಕೊಂಡ ಬಳಿಕ ದೃಢಪಡಿಸಲು ಕೋರಲಾಗಿತ್ತು.
ಸೆ.13 ರಂದು ನಾಗಲಿಂದ ಸಸಿf ಅಯೋಧ್ಯೆ ತಲುಪಿರುವ ಮಾಹಿತಿ ಬಂದಿದ್ದು,ಅಲ್ಲಿನ ಪ್ರಮುಖರೊಬ್ಬರು ಸ್ವತಃ ಕರೆ ಮಾಡುವ ಮೂಲಕ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಜಿಲ್ಲೆಯ ಹಲವು ಕಡೆಗಳಲ್ಲಿ, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಸಿ ವಿತರಿಸಿದ್ದ ವಿನೇಶ್ ಬೆಳೆದ ನಾಗಲಿಂಗ ಸಸ್ಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲೂ ಬೆಳೆದು ನೆರಳು, ಹೂವು ಕೊಡುವ ಮೂಲಕ ಆಕರ್ಷಣೆಯಾಗಲಿ ಎನ್ನುವುದು ವಿನೇಶ್ ಹಿತೈಷಿಗಳ ಆಶಯ.
ಇದನ್ನೂ ಓದಿ: ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಾಯಿಯಲ್ಲಿ ನೊರೆ, ಆಸ್ಪತ್ರೆಗೆ ದಾಖಲು ಮಾಡಿದ ಸಿಸಿಬಿ ಪೊಲೀಸರು!!!
