Udupi: ಸಾಕಿದ ನಾಯಿ ಯಜಮಾನನ ಪ್ರಾಣ ಉಳಿಸಿದ್ದು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಸಾಕು ಪ್ರಾಣಿ ನಾಯಿ (Pet Dog) ಎಂದರೆ ಮೊದಲು ಪ್ರಾಮಾಣಿಕತೆ, ನೀಯತ್ತು ನೆನಪಿಗೆ ಬರುವುದು ಸಹಜ. ಮನೆಯವರೊಂದಿಗಿದ್ದು ಮನೆಯವರಂತೆಯೇ ಆಗಿ ಬಿಡುವ ಸಾಕು ಪ್ರಾಣಿ ನಾಯಿಯ ಬಗೆಗಿನ ನೀಯತ್ತು ನೋಡಿದರೆ ಕಣ್ಣಂಚಿನಲ್ಲಿ ನೀರು ತುಂಬುತ್ತದೆ.
ಹೌದು, ಉಡುಪಿ (Udupi ) ಜಿಲ್ಲೆಯಲ್ಲಿ ಯುವಕನೊಬ್ಬ ಅರಣ್ಯಕ್ಕೆ ತೆರಳಿ ಅಲ್ಲಿ ಎಂಟು ದಿನ ದಾರಿ ತಪ್ಪಿ ಉಳಿದುಬಿಟ್ಟಿದ್ದ. ಆ ಎಂಟು ದಿನ ಜತೆಯಲ್ಲಿದ್ದೇ ಕಾದು ರಕ್ಷಣೆ ನೀಡಿದ ನಾಯಿಯ ಬಗ್ಗೆ ನೀವೂ ತಿಳಿಯಲೇ ಬೇಕು.
ಮಾಹಿತಿ ಪ್ರಕಾರ, ಸೆಪ್ಟೆಂಬರ್ 16 ರಂದು ಮಧ್ಯಾಹ್ನ ಕಂಬಕ್ಕಾಗಿ ಮರವೊಂದನ್ನು ಕಡಿದು ತರಲೆಂದು ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ಶೀನ ನಾಯ್ಕ ಅವರ ಪುತ್ರ ವಿವೇಕಾನಂದ ಕಾಡಿನಲ್ಲಿ ದಾರಿ ತಪ್ಪಿ ನಾಪತ್ತೆಯಾಗಿದ್ದ. ಇದೀಗ ಕಬ್ಬಿನಾಲೆಯ ಕಾಡಿನಲ್ಲಿ ಆತ ಪತ್ತೆಯಾಗಿದ್ದಾನೆ. ಬರೋಬ್ಬರಿ ಎಂಟು ದಿನಗಳ ಕಾಲ ಆತ ಕಾಡಿನಲ್ಲಿದ್ದ. ವಿಶೇಷವೆಂದರೆ, ಆತನ ಸಾಕುನಾಯಿಯೂ ಜತೆಯಲ್ಲಿದ್ದು ಆತನನ್ನು ಕಾಡುಪ್ರಾಣಿಗಳಿಂದ ಕಾಪಾಡಿದೆ.
ಅದೃಷ್ಟ ಎಂಬಂತೆ ವಿವೇಕಾನಂದ ಕಾಡಿಗೆ ಹೋಗುವ ಸಂದರ್ಭ ಎರಡು ಸಾಕುನಾಯಿಗಳೂ ಜತೆಗಿದ್ದವು. ಅದರಲ್ಲೊಂದು ಮರಳಿತ್ತು. ಮನೆಯವರಿಗೆ ಆತ ಕಾಡಿಗೆ ತೆರಳಿದ ವಿಚಾರ ಗೊತ್ತಿರಲಿಲ್ಲ. ಹಳೆಯ ಮಾಳಿಗೆ ಮನೆಯಾದ್ದರಿಂದ ಮಧ್ಯಾಹ್ನ ಊಟ ಮಾಡಿ ಮಹಡಿಯಲ್ಲಿ ಮಲಗಿರಬಹುದು ಅಂದುಕೊಂಡಿದ್ದರು. ಸಂಜೆಯಾದರೂ ಮಗ ಕಾಣಿಸದ ಕಾರಣ ಆತಂಕಗೊಂಡ ಮನೆಯವರು ಅಕ್ಕಪಕ್ಕದವರಿಗೆ ಸುದ್ದಿ ತಿಳಿಸಿ, ಹುಡುಕಾಟ ಆರಂಭಿಸಿದರು. ರಾತ್ರಿ 12ರವರೆಗೂ ಕಾಡಿನಲ್ಲಿ ನೂರಾರು ಮಂದಿ ಹುಡುಕಾಡಿದರು. ಭಾನುವಾರ ಪೊಲೀಸರು, ಅರಣ್ಯ ಇಲಾಖೆಯವರೂ ಸೇರಿ 200 ಮಂದಿ ಹುಡುಕಾಡಿದರು. ಶುಕ್ರವಾರದವರೆಗೆ ಪ್ರತಿದಿನ ನೂರು ಮಂದಿ ಹುಡುಕಾಟ ನಡೆಸುತ್ತಿದ್ದರು. ವಿವೇಕಾನಂದ ಸಿಗಲೇ ಇಲ್ಲ.
ಸದ್ಯ ಎಂಟನೇ ದಿನವಾದ ಶನಿವಾರ ಮನೆಯಿಂದ ನಾಲ್ಕು ಕಿ.ಮೀ ದೂರದ ಕಾಡಿನ ಅಂಚಿನಲ್ಲಿದ್ದ ಕಬ್ಬಿನಾಲೆ ಜಗನ್ನಾಥ ಶೆಟ್ಟಿಗಾರ್ ಅವರ ಮನೆಯ ಬಳಿ, ಕಾಡಿನಿಂದ ಇಳಿದು ಬರುತ್ತಿರುವ ಯುವಕನನ್ನು ನೋಡಿ, ಮನೆಯವರು ಒಳಗೆ ಕರೆದು ಉಪಚರಿಸಿದರು. ಕೂಡಲೇ ಊರಿನವರಿಗೆ ಮಾಹಿತಿ ನೀಡಲಾಯಿತು. ಆಹಾರವಿಲ್ಲದೆ, ತೀವ್ರ ಬಳಲಿದ್ದ ಆತನನ್ನು ಆಸ್ಪತ್ರಗೆ ಕರೆದೊಯ್ದು ತಪಾಸಣೆ ನಡೆಸಲಾಯಿತು. ಯಾವುದೇ ಆತಂಕವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ವಿವೇಕಾನಂದನಿಗೆ ಕೆಲ ಸಮಯಗಳಿಂದ ಅನಾರೋಗ್ಯ ಸಮಸ್ಯೆ ಇದ್ದ ಕಾರಣ ಕಾಡಿನಿಂದ ಮರಳಿ ಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಹಗಲೆಲ್ಲಾ ನಾಯಿ ಜೊತೆ ಕಾಡಿನಲ್ಲಿ ಅಲೆಯುತ್ತಿದ್ದ ಈತ, ಸಂಜೆಯಾಗುತ್ತಿದ್ದಂತೆ ಮರದ ಬುಡ, ಕಲ್ಲುಬಂಡೆ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ. ನಾಯಿ ಜತೆಗೇ ಇರುತ್ತಿತ್ತು. ಕಾಡಿನ ಹಣ್ಣು, ಕಾಯಿಗಳನ್ನು ತಿನ್ನುತ್ತಾ, ತೊರೆಯ ನೀರನ್ನು ಕುಡಿಯುತ್ತಿದ್ದರು. ಆದರೆ ಕೆಲವೊಮ್ಮೆ ಉಪವಾಸ ಇರಬೇಕಾಗಿಯೂ ಬರುತ್ತಿತ್ತು ಎಂದು ವಿವೇಕಾನಂದ ತಿಳಿಸಿದ್ದಾನೆ.
ಒಟ್ಟಿನಲ್ಲಿ ಚಿರತೆ, ಕಾಡುಹಂದಿಯಂಥ ಪ್ರಾಣಿಗಳು ಇರುವ ಕಾಡಲ್ಲಿ ನಾಯಿ ಜೊತೆಗಿರುವುದು ಆತನಿಗೆ ಧೈರ್ಯ ತುಂಬಿತ್ತು. ಅಲ್ಲದೆ ರಾತ್ರಿಯ ವೇಳೆ ಒಬ್ಬನೇ ಇರುವುದೂ ಭಯದ ಸನ್ನಿವೇಶವಿತ್ತು. ಆದರೆ ತನಗೆ ಆಹಾರವಿಲ್ಲದಿದ್ದರೂ ಕಾವಲು ಕಾದ ನಾಯಿ ಬಗ್ಗೆ ಈಗ ಅಭಿಮಾನ ಹೆಚ್ಚಿದೆ ಎಂದಿದ್ದು, ಜೊತೆಗೆ ನನ್ನೂರಿನ ಮಹಾಗಣಪತಿ ಪ್ರಾರ್ಥಿಸಿದೆ, ಹಾಗಾಗಿ ಸುರಕ್ಷಿತವಾಗಿ ಮರಳಿದೆ ಎನ್ನುತ್ತಾರೆ ವಿವೇಕಾನಂದ.
