Udupi: ನೆರೆಮನೆಯವರ ಮಧ್ಯೆ ನಡೆದ ಗಲಾಟೆ ಕೊನೆಗೆ ರಿಕ್ಷಾಕ್ಕೆ ಬೆಂಕಿ ಇಡುವಲ್ಲಿಗೆ ತಲುಪಿದ ಘಟನೆಯೊಂದು ಉಡುಪಿ(Udupi) ಪುತ್ತೂರು ಗ್ರಾಮದ ಹನುಮಂತ ನಗರದಲ್ಲಿ ನಡೆದಿದೆ.
ಪೆಂಡಾಲ್ ಹಾಕುವ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆ ನಡೆದಿತ್ತು ಎಂದು ವರದಿಯಾಗಿದೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಇದರ ದ್ವೇಷದಲ್ಲಿ ನೆರೆಮನೆಯಾತ ರಿಕ್ಷಾಕ್ಕೆ ಬೆಂಕಿ ಹಚ್ಚಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಹನುಮಂತ ನಗರ ನಿವಾಸಿ ದಿವಾಕರ ಬೆಳ್ಳಡ ಎಂಬುವವರ ಪತ್ನಿ ಜೊತೆ ಖಲೀಂ ಎಂಬುವವರು ಗಲಾಟೆ ಮಾಡಿದ್ದರು. ಅನಂತರ ಖಲೀಂ ದಿವಾಕರ್ ಅವರ ಮನೆಯ ಮಾಡಿಗೆ ಇಂಟರ್‌ಲಾಕ್ ತುಂಡು ಎಸೆದಿದ್ದು, ಈ ಕುರಿತು ದಿವಾಕರ್ ಅವರು ಪೊಲೀಸರಿಗೆ ದೂರನ್ನು ನೀಡಿದ್ದರು.
ನಂತರ ಉಡುಪಿ ಪೊಲೀಸರು ಬಂದು ವಾರ್ನಿಂಗ್ ನೀಡಿ ಹೋಗಿದ್ದರು. ಇದರಿಂದ ಕೋಪಗೊಂಡ ಖಲೀಂ ದಿವಾಕರ್ ಅವರ ಮನೆ ಮುಂದೆ ನಿಂತಿದ್ದ ರಿಕ್ಷಾಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಅಲ್ಲಿಂದ ಓಡಿ ಹೋಗಿದ್ದಾನೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದು ಅಷ್ಟರಲ್ಲಿ ರಿಕ್ಷಾದ ಟಾಪ್ ಹಾಗೂ ಹಿಂಭಾಗ ಸಂಪೂರ್ಣ ಬೆಂಕಿಗಾಹುತಿ ಆಗಿದೆ.
ಇದರಿಂದ ನನಗೆ ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದ್ದು, ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
