Gujarat: ಆ ಮಗುವಿಗೆ ಸ್ನಾನ ಮಾಡಲು ಮನಸ್ಸಿರಲಿಲ್ಲ. ಹಾಗಾಗಿ ಸ್ನಾನ ಮಾಡುವ ಭಯದಿಂದ ಆ ಮಗು ಮನೆಯಿಂದ ಓಡಿ ಬಂದು ಕಾರಿನಲ್ಲಿ ಬಚ್ಚಿಟ್ಟುಕೊಂಡಿತು. ಆದರೆ ಅಲ್ಲೇ ಉಸಿರುಗಟ್ಟಿ ಸಾವನ್ನಪ್ಪಿರುವ ದುರದೃಷ್ಟಕರ ಘಟನೆಯೊಂದು ಗುಜರಾತ್‌ನ(Gujarat) ಜುನಾಗಢದಲ್ಲಿ ನಡೆದಿದೆ.
ಈ ಘಟನೆ ಸೆ.23ರಂದು ನಡೆದಿದ್ದು, ರವೀಂದ್ರ ಭಾರತಿ ಅವರ ಐದು ವರ್ಷದ ಮಗ ಸ್ನಾನ ಮಾಡುವುರಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿಹೋಗಿ ಕಾರಿನಲ್ಲಿ ಕುಳಿತುಕೊಂಡಿದ್ದು, ಅನಂತರ ಈ ಅವಘಢ ಸಂಭವಿಸಿದೆ.
ಅಂದು ಬೆಳಗ್ಗೆ ರವೀಂದ್ರ ಭಾರತಿ ಅವರ ಪತ್ನಿ ತನ್ನ ಮೂರು ವರ್ಷದ ಮಗನಿಗೆ ಸ್ನಾನ ಮಾಡಿಸುತ್ತಿದ್ದು, ನಂತರ ತನ್ನ ಐದು ವರ್ಷದ ಮಗನ ಸ್ನಾನ ಮಾಡುವ ಸರದಿಯಾಗಿತ್ತು. ಆದರೆ ಮಗು ಆದಿತ್ಯನಿಗೆ ಸ್ನಾನ ಮಾಡಲು ಮನಸ್ಸಿರಲಿಲ್ಲ. ಸ್ವಲ್ಪ ಸಮಯ ಎಲ್ಲಾದರೂ ಅಡಗಿ ಕುಳಿತುಕೊಂಡರೆ ಸ್ನಾನ ಮಾಡುವುದರಿಂದ ಪಾರಾಗಬಹುದು ಎಂದು ಆತ ಲೆಕ್ಕಾಚಾರ ಹಾಕಿದ್ದೇ, ಅವರ ಸಾವಿಗೆ ಕಾರಣವಾಗಿದೆ. ಆತ ಬಚ್ಚಿಟ್ಟುಕೊಳ್ಳಲು ಕಾರಿನ ಒಳಗಡೆ ಹೋಗಿದ್ದು, ಆತ ಕಾರಿನ ಒಳಗಡೆ ಹೋದ ಕೂಡಲೇ ಕಾರು ಸ್ವಯಂಚಾಲಿತವಾಗಿ ಲಾಕ್ ಆಗಿ, ಆದಿತ್ಯ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಪೊಲೀಸರ ಪ್ರಕಾರ, ರವೀಂದ್ರ ಭಾರತಿ ಅವರ ಪತ್ನಿ ತನ್ನ ಕಿರಿಯ ಮಗನಿಗೆ ಸ್ನಾನ ಮಾಡಿಸಿ ಬಿಡುವಿನ ವೇಳೆಯಲ್ಲಿ ಹಿರಿಯ ಮಗ ಆದಿತ್ಯನಿಗೆ ಸ್ನಾನ ಮಾಡಿಸಲು ಹುಡುಕಾಟ ಆರಂಭಿಸಿದಳು. ಮಗುವನ್ನು ಮನೆಯ ಮೂಲೆ ಮೂಲೆಯಲ್ಲೂ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಆದಿತ್ಯ ಕಾರಿನ ಸುತ್ತಲೂ ಓಡಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರು ಬೇರೆ ಯಾರದ್ದೂ ಅಲ್ಲ ರವೀಂದ್ರ ಅವರ ಮಾಲೀಕರದ್ದು. ನಂತರ ಎಲ್ಲರೂ ಕಾರಿನ ಸ್ಥಳವನ್ನು ತಲುಪಿದರು, ಅವರು ಕಾರಿನ ಬಳಿ ಹೋಗಿ ಕಾರಿನ ಬಾಗಿಲು ತೆರೆದಾಗ, ಆದಿತ್ಯ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದು ಕಂಡು ಬಂದಿದೆ.
ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಡಾಕ್ಟರ್ ಮಗುವಿನ ಗಂಭೀರ ಪರಿಸ್ಥಿತಿಯನ್ನು ಕಂಡು, ರಾಜ್‌ಕೋಟ್‌ನ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿ ತಲುಪುವ ಮೊದಲು ದಾರಿಯಲ್ಲೇ ಮಗು ಸಾವಿಗೀಡಾಗಿದೆ. ಸುಮಾರು ಎರಡೂವರೆ ಗಂಟೆ ಕಾಲ ಕಾರಿನಲ್ಲಿಯೇ ಮಗು ಲಾಕ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲು ಮಾಡಿದ್ದಾರೆ.
ಅಂದ ಹಾಗೆ ರವೀಂದ್ರ ಅವರು ಕಳೆದ ಹತ್ತು ವರ್ಷಗಳಿಂದ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಉತ್ತರಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ನಿವಾಸಿಯಾಗಿದ್ದರು. ಇವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಮಾಲೀಕ ನೀಡಿದ ಮನೆಯೊಂದರಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ಆಂಬ್ಯುಲೆನ್ಸ್ ಆಟೋರಿಕ್ಷಾಗೆ ಡಿಕ್ಕಿ : ಮಗು ಸೇರಿ ಆಟೋಚಾಲಕನಿಗೆ ಗಾಯ!
