Dakshina Kannada : ಯುವ ಜನತೆ ಇಂದಿಗೆ ಹೃದಯಾಘಾತಕ್ಕೆ ತುತ್ತಾಗಿರುವ ಘಟನೆ ಹಲವು ನಡೆದಿದೆ(Dakshina Kannada news). ಇದೀಗ ಪೊಲೀಸ್ ಇಲಾಖೆಯ ಸಿಬ್ಬಂದಿಯೋರ್ವರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆಯೊಂದು ನಡೆದಿದೆ. ಮಂಗಳೂರು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯಾದ ಸೋಮನ ಗೌಡ ಚೌಧರಿ (31) ಮೃತಪಟ್ಟ ಪೊಲೀಸ್ ಸಿಬ್ಬಂದಿ.
ಸೋಮನ ಗೌಡ ಅವರು ಮೂಲತಃ ಬಿಜಾಪುರ ಜಿಲ್ಲೆಯವರು. ವಯರ್‌ಲೆಸ್ ಇನ್ಸ್‌ಪೆಕ್ಟರ್ ವಾಹನಕ್ಕೆ ಚಾಲಕನಾಗಿ ಕರ್ತವ್ಯ ಮಾಡುತ್ತಿದ್ದರು. ಡೆಂಗ್ಯೂ ಜ್ವರ ಬಂದಿದ್ದರಿಂದ ಇನ್ಸ್‌ಪೆಕ್ಟರ್ ಅವರನ್ನು ನಗರದ ಫಳ್ನೀರ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಮಂಗಳವಾರ ಬೆಳಿಗ್ಗೆ ಕರೆದುಕೊಂಡು ಹೋಗಿದ್ದರು ಸೋಮನ ಗೌಡ ಅವರು.
ಅನಂತರ ಅಧಿಕಾರಿಯನ್ನು ಆಸ್ಪತ್ರೆ ಬಳಿ ಬಿಟ್ಟು, ವಾಹನ ಪಾರ್ಕ್ ಮಾಡಲು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಕೂಡಲೇ 112ಗೆ ಕರೆ ಮಾಡಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲೆಂದು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ ಏಳು ವರ್ಷಗಳಿಂದ ನಗರ ಸಶಸ್ತ್ರದಳಲ್ಲಿ ಇದ್ದ ಸೋಮನ ಗೌಡ ಅವರು ವಿವಾಹಿತರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
