Murder Case: ಸಣ್ಣ ಪುಟ್ಟ ಕಾರಣಗಳಿಗೆ, ಸಂಬಂಧಗಳು, ಸ್ನೇಹ, ವಿಶ್ವಾಸ ಎಲ್ಲವನ್ನು ಬದಿಗಿಟ್ಟು ಮನುಷ್ಯ ಕ್ರೂರಿಯಂತೆ ವರ್ತಿಸುತ್ತಾನೆ. ಅದರಲ್ಲೂ ನಗರದಲ್ಲಿ ಕೊಲೆ, ದರೋಡೆ, ಸರಗಳ್ಳತನ, ಮಾದಕ ದ್ರವ್ಯ ಸೇವನೆ ಘಟನೆಗಳು ದಿನನಿತ್ಯ ನಡೆಯುತ್ತಿವೆ. ಇದೀಗ ಗುವಾಹಟಿ ನಗರದ ನೂನ್ಮತಿ ಗಣೇಶ ಮಂದಿರ ರಸ್ತೆಯಲ್ಲಿ ಶನಿವಾರ ಆಘಾತಕಾರಿ ಕೊಲೆಯೊಂದು (Murder Case) ನಡೆದ ಮಾಹಿತಿ ದೊರೆತಿದೆ.
ಅಸ್ಸೋಂನ ರಾಜಧಾನಿ ಮತ್ತು ಈಶಾನ್ಯ ಭಾರತದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಗುವಾಹಟಿಯ ನೂನ್ಮತಿ ಗಣೇಶ ಮಂದಿರ ರಸ್ತೆಯಲ್ಲಿರುವ ಬಿಜಯ ಜ್ಯೋತಿ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂ 3C ನ ಮೂರನೇ ಮಹಡಿಯಲ್ಲಿ ಒಬ್ಬ ಯುವಕನನ್ನು ಇನ್ನೊಬ್ಬ ಯುವಕ ಬರ್ಬರವಾಗಿ ಹೊಡೆದು ಕೊಂದಿದ್ದಾನೆ. ಈ ಘಟನೆ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ ಸಾವನ್ನಪ್ಪಿದ ಯುವಕನನ್ನು ಬಾಮುನಿಮೊಯ್ದನ್ ರೈಲ್ವೆ ಕಾಲೋನಿ ನಿವಾಸಿ ರೋಹಿತ್ ದರ್ಜಿ ಎಂದು ಗುರುತಿಸಲಾಗಿದೆ. ರೋಹಿತ್ ಇಡೀ ದಿನ ತನ್ನ ಸ್ನೇಹಿತ ಬಿಜಯ ಜ್ಯೋತಿ ಅಪಾರ್ಟ್‌ಮೆಂಟ್ ಮಾಲೀಕನ ಮಗ ಶುಭ್‌ಜಿತ್ ಬೋರಾ ಜೊತೆ ಕಳೆದಿದ್ದಾನೆ. ಆ ಸಮಯದಲ್ಲಿ ಶುಭ್‌ಜಿತ್ ರೋಹಿತ್‌ನನ್ನು ಕೊಂದು ಶವವನ್ನು ಗಣೇಶ ಮಂದಿರದ ರಸ್ತೆಯಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ನೆರೆಹೊರೆಯವರು ಇಡೀ ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಶುಭ್‌ಜಿತ್ ತನ್ನ ಸ್ಕೂಟಿಯ ಮೂಲಕ ಶವವನ್ನು ಸಾಗಿಸಲು ಪ್ರಯತ್ನಿಸಿದ್ದಾನೆ. ಆದರೆ ಆ ಸಮಯದಲ್ಲಿ ನೆರೆಹೊರೆಯವರು ಅವನನ್ನು ಗಮನಿಸಿದ್ದಾರೆ. ನಂತರ ಶವವನ್ನು ರಸ್ತೆಯಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಫ್ಲಾಟ್‌ನ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ಸಂಗ್ರಹಿಸಿದ್ದು, ಶುಭ್‌ಜಿತ್ ಶವವನ್ನು ತನ್ನ ಸ್ಕೂಟಿಯಲ್ಲಿ ಸಾಗಿಸಲು ಪ್ರಯತ್ನಿಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಮಾದಕ ದ್ರವ್ಯ ಸೇವನೆಯಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಸುಭ್ರಜಿತ್ ಬೋರಾ ಇನ್ನೂ ತಲೆಮರೆಸಿಕೊಂಡಿದ್ದಾನೆ. ರೋಹಿತ್ ತಂದೆ ನೂನ್ಮತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಈಗಾಗಲೇ ದಾಖಲಿಸಿದ್ದು, ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
