Underworld Threat: ಅಪರಿಚಿತ ವ್ಯಕ್ತಿಯೊಬ್ಬ ಭೂಗತ ಲೋಕದ ಪಾತಕಿ(Underworld Threat) ಎಂದು ಪರಿಚಯಿಸಿ ದುಬೈನಿಂದ ಪುತ್ತೂರಿನ ವಕೀಲರೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಕುರಿತಂತೆ ಪುತ್ತೂರು(Puttur)ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸೆಂಟರ್ ಕಟ್ಟಡದಲ್ಲಿ ಕಚೇರಿ ವಕೀಲರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಶಾಂತ್ ಪಿ. ರೈ ಅವರಿಗೆ ಅಪರಿಚಿತರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ವಕೀಲರಿಗೆ ಕರೆ ಮಾಡಿ ತಾನೊಬ್ಬ ಭೂಗತ ಪಾತಕಿ ಎಂದು ಹೇಳಿಕೊಂಡ ಜಗ್ಗು ಶೆಟ್ಟಿ ತಾನು ಕಳುಹಿಸಿದ ರೌಡಿ ಗ್ಯಾಂಗಿನ ಸದಸ್ಯರಲ್ಲಿ 25 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಮೇ.2ರಂದು ರಾತ್ರಿ ವೇಳೆಗೆ ವಕೀಲ ಪ್ರಶಾಂತ್ ರೈ ಮೊಬೈಲ್ ಗೆ ಕರೆ ಮಾಡಿದ್ದ ಜಗ್ಗು ಶೆಟ್ಟಿ ಎಂದು ಹೇಳಿಕೊಂಡಿರುವ ಅನಾಮಿಕ , ” ನೀನು ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ಕೋಟಿಗಟ್ಟಲೇ ಹಣ ಸಂಪಾದನೆ ಮಾಡಿದ್ದೀಯ!! ಆ ಹಣದಿಂದ ಜಮೀನು, ಕಟ್ಟಡಗಳು ಹಾಗೂ ಸ್ವತ್ತುಗಳು ನಿನ್ನ ಬಳಿಯಿವೆ. ಇದರಲ್ಲಿ ನನಗೆ ರೂ.25 ಲಕ್ಷ ಹಣವನ್ನು ನಾನು ಕಳುಹಿಸಿಕೊಡುವ ರೌಡಿ ಗ್ಯಾಂಗಿನ ಸದಸ್ಯರಲ್ಲಿ ನೀಡಬೇಕು ” ಎಂದು ಬೆದರಿಕೆ ಹಾಕಿದ್ದಾನೆ.
ಜುಲೈ6ರಂದು ಸಂಜೆ ವೇಳೆಗೆ ವಕೀಲರಾದ ಪ್ರಶಾಂತ್ ರೈ, ಕಕ್ಷಿದಾರರೊಂದಿಗೆ ನ್ಯಾಯಾಲಯದೆಡೆಗೆ ತೆರಳುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗಳು ಪ್ರಶಾಂತ್ ರೈ ಅವರ ಬಳಿಗೆ ಬಂದು ತಮ್ಮನ್ನು ಬಾಸ್ ಜಗ್ಗು ಶೆಟ್ಟಿ ಅವರು ಕಳುಹಿಸಿಕೊಟ್ಟಿದ್ದಾರೆ. ನಮ್ಮಲ್ಲಿ ರೂ.25 ಲಕ್ಷ ಹಣ ನೀಡಬೇಕು. ಒಂದು ವೇಳೆ ಇದನ್ನು ತಪ್ಪಿದಲ್ಲಿ ನಿಮ್ಮನ್ನು ಕೊಲೆ ಮಾಡಲು ಬಾಸ್ ಆದೇಶ ನೀಡಿದ್ದಾರೆ ಎಂದು ಬೆದರಿಕೆಯೊಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಿ ವಕೀಲ ಪ್ರಶಾಂತ್ ರೈ ಅವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದಾರೆ. ಇದೀಗ ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
