Israel War: ತಾಲಿಬಾನ್ (taliban)ಅಂದರೆ ಸಾಕು ಎಲ್ಲರಿಗೂ ಒಂದು ಕ್ಷಣ ಮೈ ಜುಮ್ ಎನ್ನುತ್ತದೆ. ತಾಲಿಬಾನ್ ಉಗ್ರರು ಅದೆಷ್ಟು ಭೀಕರ ಎನ್ನುವುದನ್ನು ವಿವರಿಸಬೇಕಾಗಿಲ್ಲ. ಅದರಲ್ಲೂ ಹಿಂಸೆ ಮಾಡುವಾಗ ಹಿಂದೆಮುಂದೆ ನೋಡದೆ ನರಬಲಿ ಮಾಡುವುದರಲ್ಲಿ ತಾಲಿಬಾನ್ ಭಯೋತ್ಪಾದಕರು(Terrorists)ನಿಸ್ಸೀಮರು. ಇಂತಹ ಉಗ್ರರ ಬಾಯಲ್ಲಿ ಈಗ ಶಾಂತಿ ಭೋದನೆ ಕೇಳಿದರೆ ಯಾರಿಗಾದರೂ ಅಚ್ಚರಿ ಎನಿಸದೆ ಇರದು. ಅದರಲ್ಲೂ ನಮಗೆ ಯುದ್ಧದ(War)ಸಹವಾಸವೆ ಬೇಡಪ್ಪ!!, ನಮಗೆ ಶಾಂತಿ ಸಾಕು ಎಂದು ಹೊಸ ಮಂತ್ರ ಜಪಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಿ ರಕ್ತದೋಕುಳಿ ಹರಿಸಿ ಎಲ್ಲರ ಜೀವ ಚೆಂಡಾಡುತ್ತಿದ್ದ ತಾಲಿಬಾನ್ ಉಗ್ರರು ಇವರೇನಾ ?? ಎಂಬ ಅನುಮಾನ ಕಾಡುವುದು ಸಹಜ! ಇದೀಗ,ಯುದ್ಧ ಮತ್ತು ಹಿಂಸೆ ಬೇಡವೆಂದು ಹೊಸ ವರಸೆ ಬದಲಿಸಲು ಕಾರಣವೇನು ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ?? ಇದಕ್ಕೆ ತಾಲಿಬಾನ್ ಉತ್ತರ ಕೂಡ ನೀಡಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಇದೀಗ ಇಸ್ರೇಲ್(Israel War)ಮತ್ತು ಹಮಾಸ್ ಉಗ್ರರ ನಡುವೆ ಭೀಕರ ಯುದ್ಧ ಪ್ರಾರಂಭವಾಗಿದೆ. ಆದರೆ ಈ ಸಮಯದಲ್ಲೇ ತಾಲಿಬಾನ್ ಕೂಡ ಇಸ್ರೇಲ್ ವಿರುದ್ಧ ಯುದ್ಧದಲ್ಲಿ ಭಾಗಿಯಾಗಲಿದೆ. ಅಫ್ಘಾನ್ನ ತಾಲಿಬಾನ್ ಉಗ್ರರು ಹಮಾಸ್ ಜೊತೆಗೆ ಸೇರಿ ಇಸ್ರೇಲ್ ವಿರುದ್ಧ ಬಾಂಬ್ ಹಾಕಲಿದ್ದಾರೆ ಎನ್ನುವ ಸುದ್ದಿಗಳು ಜೋರಾಗಿ ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ತಾಲಿಬಾನ್ ಯುದ್ಧ ಬೇಡ ಎನ್ನುವ ಮೂಲಕ ಶಾಂತಿ ಸಾರುವ ಹೊಸ ವರಸೆಯ ಪ್ರದರ್ಶನ ಮಾಡುತ್ತಿದೆ. ತಾಲಿಬಾನ್ ಸಂಘಟನೆಗೆ ಅಫ್ಘಾನಿಸ್ತಾನದ ಭವಿಷ್ಯದ ಚಿಂತೆ ಕಾಡುತ್ತಿದೆಯೆನೋ ?!. ಎಂಬ ಶಂಕೆ ವ್ಯಕ್ತವಾಗಿದೆ.ಈ ಹಿಂದೆ ಮಾತು ಎತ್ತಿದರೆ ಸಾಕು ನರಬಲಿ , ಹತ್ಯೆ, ಗುಂಡು ಎಂದು ಹಾರಾಡುತ್ತಿದ್ದ ತಾಲಿಬಾನ್, ಇದೀಗ ಇಸ್ರೇಲ್ ಸೇನೆ & ಹಮಾಸ್ನ ಉಗ್ರರಿಗೆ ಮಾತುಕತೆ ಮೂಲಕ ಸಮಸ್ಯೆ ಸರಿಪಡಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿದ್ದು ಅಚ್ಚರಿ ಮೂಡಿಸುವುದು ಸುಳ್ಳಲ್ಲ. 20 ವರ್ಷಗಳ ಹಿಂದೆ ಇದ್ದ ತಾಲಿಬಾನ್, ಹಾಗೂ ಈಗಿರುವ ತಾಲಿಬಾನ್ ಬೇರೆ ಎಂಬುದು ಈಗ ಮತ್ತೊಮ್ಮೆ ಜಗಜ್ಜಾಹೀರಾಗಿದೆ.ಈ ಮೂಲಕ ತಾಲಿಬಾನ್ ಉಗ್ರರು ಹಮಾಸ್ ಜೊತೆಗೆ ಕೈಜೋಡಿಸಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆ.
