Emergency alert message : ಪ್ರತಿಯೊಬ್ಬರ ಮೊಬೈಲ್ ಗೂ ಗುರುವಾರ ಸರ್ಕಾರವು ಪರೀಕ್ಷಾರ್ಥವಾಗಿ ಬೀಪ್ ಶಬ್ದದೊಂದಿಗೆ ಎಚ್ಚರಿಕೆ ಸಂದೇಶ ಬಂದಿದ್ದು, ಇದರಿಂದ ವಿಷಯ ಗೊತ್ತಿಲ್ಲದ ಕೆಲವರು ಕ್ಷಣ ಕಾಲ ಆತಂಕಗೊಂಡಿದ್ದು, ಸಹಜ. ಆದರೆ ಈ ಬೀಪ್ ಸದ್ದು ಕಳ್ಳ ಮನಸ್ಸಿನ ಹುಷಾರಿ ಹುಡುಗ ಹುಡುಗಿಯರನ್ನು ಮೇಷ್ಟ್ರ ಕೈಗೆ ಸಿಕ್ಕಿ ಹಾಕಿ ಪೇಚಿಗೆ ಸಿಕ್ಕಿಸಿದ ಘಟನೆ ನಡೆದಿದೆ.
ಕಳೆದ ಎರಡು ದಿನಗಳಿಂದ ರಾಜ್ಯದ ದೂರಸಂಪರ್ಕ ಇಲಾಖೆ (ಸಿ-ಡಾಟ್) ಸೆಲ್ ಬ್ರಾಡ್ ಕಾಸ್ಟಿಂಗ್ ಮೂಲಕ ತುರ್ತು ಎಚ್ಚರಿಕೆ ವ್ಯವಸ್ಥೆಯ ಕುರಿತು ಸಂದೇಶಗಳನ್ನು (Emergency alert message )ಕಳುಹಿಸುತ್ತಿದೆ. ಅಂತೆಯೇ ಗುರುವಾರ ರಾಜ್ಯದ ಹೆಚ್ಚಿನ ಜನರಿಗೆ ಈ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಈ ಸಂದೇಶವನ್ನು ಸ್ವೀಕರಿಸಿದ್ದಾರೆ.
ಮೊಬೈಲ್ ಹ್ಯಾಕ್ ಆಯಿತು, ವೈರಸ್ ಅಟ್ಯಾಕ್ ಆಗಿದೆ ಎಂದು ಗಾಬರಿ:
ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ಕಳಿಸುವ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಪರೀಕ್ಷಾ ಸಂದೇಶ ಇದಾಗಿದೆ, ಇದಕ್ಕೆ ಯಾವುದೇ ಪ್ರತಿಕ್ರಿಯೆಯ ಅಗತ್ಯವಿಲ್ಲ, ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ ಎಂದು ಸಂದೇಶದಲ್ಲಿ ಹೇಳಲಾಗಿತ್ತು. ಆದರೂ ಕೆಲವರು ಗಾಬರಿ ಬಿದ್ದಿದ್ದರು. ಕೆಲ ಹಿರಿಯರು ತಮ್ಮ ಮೊಬೈಲ್ ಗೆ ವೈರಸ್ ಬಂತು ಅಂತ ಪೇಚಾಡಿದ್ದರು. ಮೊಬೈಲ್ ಹ್ಯಾಕ್ ಆಯಿತು, ಮೊಬೈಲ್ ಹಾಳಾಯಿತು ಅಂತ ಗಾಬರಿ ಪಟ್ಟು ಅವರಿವರಲ್ಲಿ ಹೇಳಿಕೊಂಡವರೂ ಇದ್ದಾರೆ.
ಈ ಸಂದೇಶವನ್ನು ನಿಲ್ಲಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ, ನೆಟ್ವರ್ಕ್ ವಲಯದಲ್ಲಿ ಇಲ್ಲದೇ ಇದ್ದರೂ, ಏರೋಪ್ಲೇನ್ ಮೋಡ್ ನಲ್ಲಿ ಇದ್ದರೂ ಈ ಸಂದೇಶ ಬರುತ್ತಿದೆ ಎಂದು ಕೆಲವರು ಗ್ರಾಹಕರು ಚರ್ಚೆ ನಡೆಸುತ್ತಿದ್ದರು. ಸ್ಮಾರ್ಟ್ ಫೋನ್ ಬಳಕೆದಾರರು ಈ ಸಂದೇಶವನ್ನು ಓದಿರುವುದನ್ನು ಖಚಿತಪಡಿಸಿದ ಬಳಿಕವಷ್ಟೇ ಬೀಪ್ ಶಬ್ದ ನಿಲ್ಲುವಂತೆ ಮಾಡುವ ಆಯ್ಕೆ ಇತ್ತು. ಇದು ಕೇವಲ ಎಚ್ಚರಿಕೆ ಪರೀಕ್ಷೆ. ಎಲ್ಲ ನಾಗರಿಕರೂ ಇದನ್ನು ಓದಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದಷ್ಟೇ ಇದರ ಉದ್ದೇಶವಾಗಿತ್ತು.
ಬೀಪ್ ಸದ್ದಿಗೆ ಮಕ್ಕಳು ಲಾಕ್, ಶಿಕ್ಷಕರು ರಾಕ್ :
ಇನ್ನು ಶಾಲೆ ಕಾಲೇಜುಗಳಲ್ಲಿ, ಮನೆಯವರು ಮತ್ತು ಮೇಷ್ಟ್ರು ಎಷ್ಟೇ ಹೇಳಿದರೂ ಮಕ್ಕಳು ಗುಪ್ತವಾಗಿ ಮೊಬೈಲ್ ಕ್ಯಾರಿ ಮಾಡೋದು ಎಲ್ಲರಿಗೂ ತಿಳಿದೇ ಇದೆ. ಹೀಗೆ ಶಾಲೆ, ಕಾಲೇಜುಗಳಲ್ಲಿ ಮೊಬೈಲ್ ಗೆ ನಿರ್ಬಂಧವಿದ್ದರೂ ಹಲವು ವಿದ್ಯಾರ್ಥಿಗಳು ಮೊಬೈಲ್ ಅಡಗಿಸಿ ತರೋದು, ಆವಾಗಾವಾಗ ಸಿಕ್ಕಿ ಬೀಳೋದು ಯಾರಿಗೆ ಗೊತ್ತಿಲ್ಲ ಹೇಳಿ? ಇದೀಗ ಅಂಥದ್ದೇ ಒಂದು ಸ್ವಾರಸ್ಯಕರ ಪ್ರಸಂಗ ನಡೆದಿದೆ. ನಿನ್ನೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಫೋನ್ ಅನ್ನು ಸೈಲೆಂಟ್ ಆಗಿ ಎಲ್ಲೆಲ್ಲೋ ಅಡಗಿಸಿ ಇಟ್ಟಿದ್ದ ಸಂದರ್ಭದಲ್ಲಿ, ದೊಡ್ಡದಾಗಿ ‘ಬೀಪ್ ಬೀಪ್’ ಅಲರ್ಟ್ ಮೆಸೇಜ್ ಬಂದಿದೆ. ಕ್ಲಾಸಿನಲ್ಲಿ ರಾಕ್ ಆಗುತ್ತಿದ್ದ ಸ್ಟೂಡೆಂಟ್ಸ್ ಕಕ್ಕಾಬಿಕ್ಕಿ ಆಗಿದ್ದಾರೆ. ಮಕ್ಕಳು ಶಿಕ್ಷಕರ ಕೈಲಿ ಮೊಬೈಲ್ ಸಮೇತ ಲಾಕ್ ಆಗಿದ್ದಾರೆ. ಈ ಘಟನೆ ದಕ್ಷಿಣ ಕನ್ನಡದ ಪುತ್ತೂರಿನ ಕಾಲೇಜೊಂದರಲ್ಲಿ ನಡೆದಿದೆ. ಹೀಗೆ ಅಲ್ಲಿ ಶಿಕ್ಷಕರು ಹಲವು ವಿದ್ಯಾರ್ಥಿಗಳ ಮೊಬೈಲ್ ಅನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿಯಿದೆ.
