Ram Mandir: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ (Ram Mandir) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಲಿದ್ದು, ಈ ನಿಟ್ಟಿನಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಇದರ ನಡುವೆ, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರುವ ಕಾರ್ಮಿಕರು ಮತ್ತು ಮಂದಿರದ ಅರ್ಚಕರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ವೇತನವನ್ನು ಶೇ.35ರಿಂದ ಶೇ.40ರಷ್ಟು ಏರಿಕೆ ಮಾಡಲಾಗಿದೆ.
ರಾಮಮಂದಿರ ನಿರ್ಮಾಣದಲ್ಲಿ ತೊಡಗಿರುವ, ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರು, ಸಹಾಯಕ ಅರ್ಚಕರು ಹಾಗೂ ವಿವಿಧ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೇತನ ಹೆಚ್ಚಿಸುವ ನಿರ್ಣಯ ಕೈಗೊಂಡಿದೆ. ಸ್ಟೋರ್ ಕೀಪರ್, ಮ್ಯಾನೇಜರ್, ಮಾಲಿಗಳಿಗೂ ವೇತನ ಹೆಚ್ಚಳವಾಗಲಿದೆ.
ಅರ್ಚಕರ ಸಂಬಳ ಎಷ್ಟು?
ರಾಮಮಂದಿರ ಅರ್ಚಕರಿಗೆ ಇದುವರೆಗೆ ಮಾಸಿಕ 25 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಈಗ ಅವರಿಗೆ 32,900 ರೂ. ನೀಡಲಾಗುತ್ತದೆ. ಅದೇ ರೀತಿ, ಸಹಾಯಕ ಅರ್ಚಕರಿಗೆ 20 ಸಾವಿರ ರೂ. ಇದ್ದ ಸಂಬಳವನ್ನು 31 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. ಆದರೆ, ಮಾಲಿಗಳು, ಮ್ಯಾನೇಜರ್‌ಗಳು ಸೇರಿ ಇತರೆ ಸಿಬ್ಬಂದಿಗೆ ಎಷ್ಟು ಸಂಬಳ ನೀಡಲಾಗುತ್ತಿದೆ ಎಂಬ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.
