Marriage: ಅವರಿಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದರು. ಆದರೆ ಗಂಡ ತನ್ನ ಚಪಲ ಬುದ್ಧಿ ತೋರಿಸಿದ್ದ. ಬೇರೆ ಹೆಣ್ಣಿನ ಚಟ ಹೊಂದಿದ ಆತನ ಕ್ರಮೇಣ ತನ್ನ ಹೆಂಡತಿಯ ಜೊತೆ ಹಣದ ವಿಷಯಕ್ಕೆ ಪೀಡಿಸಲಾರಂಭಿಸಿದ್ದಾರೆ. ಇದರಿಂದ ಬೇಸತ್ತ ಪತ್ನಿ ತನ್ನ ತವರು ಮನೆ ಸೇರಿಕೊಂಡಿದ್ದಳು. ಆದರೂ ಪತ್ನಿಯ ಜೊತೆ ಒಳ್ಳೆಯ ರೀತಿಯಲ್ಲಿರುವಂತೆ ನಾಟಕವಾಡಿ ಕೊಂಡಿದ್ದ ಈತ ಇದೀಗ ಕಾನೂನು ಬಾಹಿರವಾಗಿ ಹಿಂದೂ ಸಮುದಾಯದ ಯುವತಿಯ ಜೊತೆ ಮದುವೆಯಾಗಿದ್ದಾನೆ( Marriage) ಎಂದು ಟಿವಿ9 ವರದಿ ಮಾಡಿದೆ. ಈ ಘಟನೆ ಹಿನ್ನೆಲೆ ಕಾರವಾರ (Karwar) ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಂಡೇಲಿ (Dandeli)ನಿವಾಸಿಯಾದ ನೂರ್ ಜಹಾನ್ ಹಾಗೂ ಖಾದರ್ ಆಲಿ ಹಸನ್ ಸಾಬ್ ಶೇಕ್ ಇಬ್ಬರು 2017 ರಲ್ಲಿ ಮದುವೆಯಾಗಿತ್ತು. ಒಳ್ಳೆಯ ಸಂಸಾರ ನಡೆಸಿಕೊಂಡಿದ್ದ ಇವರಿಬ್ಬರು, ಮದುವೆಯಾಗಿ ಎರಡನೇ ವರ್ಷ ತುಂಬುತ್ತಿದ್ದಂತೆ ಗಂಡ ಮತ್ತು ಆತನ ಮನೆಯವರು ಆಕೆಗೆ ಕಿರುಕುಳ ನೀಡಲು ಪ್ರಾರಂಭ ಮಾಡಿದ್ದರು. ಬೇರೆ ಮನೆ ಮಾಡುತ್ತೇನೆಂದು ಪತ್ನಿಯನ್ನು ತವರು ಮನೆಗೆ ಕಳುಹಿಸಿದ ಗಂಡ ಬೇರೊಂದು ಯುವತಿ ಜೊತೆ ಚಕ್ಕಂದ ಆಡೋಕೆ ಶುರು ಮಾಡಿಕೊಂಡಿದ್ದ.
ಇದನ್ನು ತಿಳಿದ ಪತ್ನಿ ನೂರ್‌ಜಹಾನ್ ನ್ಯಾಯಕ್ಕಾಗಿ ಜಮಾತ್‌ನತ್ತ ಹೋದರೂ ಯಾವುದೇ ನ್ಯಾಯ ಸಿಗಲಿಲ್ಲ. ನಂತರ ಪೊಲೀಸ್ ಠಾಣೆಯಲ್ಲಿ ರಾಜಿ ಮಾಡಿಸಿ ಇಬ್ಬರನ್ನೂ ಮನೆಗೆ ಕಳುಹಿಸಲಾಗಿತ್ತು. ಆದರೆ ಗಂಡ ಮತ್ತೆ ತನ್ನ ಚಾಳಿ ಮುಂದುವರಿಸಿದ್ದು, ಹೆಂಡತಿಯನ್ನು ತಾಯಿ ಮನೆಯಲ್ಲಿ ಇರಿಸಿ, ವಿದೇಶಕ್ಕೆ ಎರಡು ವರ್ಷ ಹೋಗಿದ್ದ. ನಂತರ ವಿದೇಶದಿಂದ ವಾಪಾಸ್ ಬಂದರು ಪತ್ನಿಗೆ ಹಣ ನೀಡದೇ ಉಡಾಫೆ ತೋರಿಸಿದ್ದಾನೆ.
ಈತ ತನ್ನ ಮೊದಲ ಹೆಂಡತಿಯ ಜೊತೆ ಪ್ರೀತಿಯ ನಾಟಕ ಮಾಡುತ್ತಲೇ, ಇದೇ ವರ್ಷ ಜುಲೈ 13ರಂದು ತನ್ನೂರಿನ ಹಿಂದೂ ಪರಿಶಿಷ್ಟ ಜಾತಿ ಸಮುದಾಯದ ಯುವತಿಯೋರ್ವಳ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು, ತನ್ನದು ಇದು ಮೊದಲ ಮದುವೆ ಎಂದು ಆ ಹಿಂದೂ ಹುಡುಗಿಗೂ ಸುಳ್ಳು ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ. ಇದನ್ನು ತಿಳಿದ ಪತ್ನಿ ಈ ಮದುವೆಗೆ ಮಾನ್ಯತೆ ನೀಡಬಾರದು ನನಗೆ ನ್ಯಾಯ ಸಿಗಬೇಕು, ಈ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯ ಮಾಡಿದ್ದಾಳೆ.
ದಾಂಡೇಲಿಯ ಸೈನ್ಯ ದಲಿತ ಸಂಘಟನೆ, ನೂರ್ ಸಹಾಯಕ್ಕೆ ನಿಂತಿದೆ. ನೂರ್ ಅವರಿಗೆ ನ್ಯಾಯ ದೊರಕದೇ ಹೋದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
