Dakshina Kannada: ಇಂದು ಭಾನುವಾರ. ವಾರದ ಕೊನೆಯ ದಿನ ಎಲ್ಲರಿಗೂ ರಜೆ. ಹಾಗಾಗಿ ಸಾಮಾನ್ಯವಾಗಿ ಮನೆಯಲ್ಲಿ ಕೋಳಿ, ಮೀನಿನ ಊಟದ ಸಂಭ್ರಮ ಇರುತ್ತದೆ. ಹಾಗಾಗಿಯೇ ಓರ್ವ ಪ್ರಯಾಣಿಕ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ್ದಾನೆ. ಇಂದು ಮನೆಯಲ್ಲಿ ಬಾಡೂಟದ ಆಸೆಯಲ್ಲಿದ್ದ ಕೂಲಿ ಕಾರ್ಮಿಕನಿಗೆ ಬಸ್ಸಲ್ಲೇ ಭ್ರಮನಿರಸನ ಆಗೋ ಘಟನೆಯೊಂದು ನಡೆದಿದೆ. ಅದೇನೆಂದರೆ ಮಾಂಸ ತಗೊಂಡು ಬಸ್ ಹತ್ತಿದ ಎಂಬ ಒಂದೇ ಕಾರಣಕ್ಕಾಗಿ ಆ ಬಸ್ನ ನಿರ್ವಾಹಕ ಆ ಪ್ರಯಾಣಿಕನಿಗೆ ಬಾಯಿಗೆ ಬಂದ ಹಾಗೆ ಬೈಯ್ದಿದ್ದಾನೆ.
ಕೂಡಲೇ ಚಾಲಕ ಪ್ರಯಾಣಿಕರಿದ್ದ ಆ ಬಸ್ಸನ್ನು ಸೀದಾ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾನೆ. ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಪುತ್ತೂರು ತಾಲೂಕಿನಲ್ಲಿ.
ಸುರೇಶ್ ಎಂಬ ವ್ಯಕ್ತಿಯೇ ಈ ಟೀಕೆಗೆ ಗುರಿಯಾದವರು. ಇವರು ತುಂಬೆಯಲ್ಲಿ ಸ್ಟೇಟ್ಬ್ಯಾಂಕ್ ಪುತ್ತೂರು KSRTC ಬಸ್ಸು ಹತ್ತಿದ್ದಾರೆ. ಎಂದಿನಂತೆ ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಿದ್ದಾನೆ. ಆಗ ಸುರೇಶ್ ಅವರ ಕೈಯಲ್ಲಿದ್ದ ಚೀಲ ನೋಡಿ ಇದೇನು ಎಂದು ವಿಚಾರಿಸಿದಾಗ ಆತ ಕೋಳಿ ಮಾಂಸ ಎಂದು ಹೇಳಿದ್ದಾನೆ. ಅಷ್ಟೇ, ಅದೇನಾಯ್ತೋ ಸುರೇಶ್ ಅವರಿಗೆ ನಿರ್ವಾಹಕ, ಕೂಡಲೇ ಬಸ್ಸಿನಿಂದ ಇಳಿಯಲು ಹೇಳಿದ್ದಾನೆ. ಕೋಳಿ ಮಾಂಸ ಬಸ್ನಲ್ಲಿ ತರಲು ಅವಕಾಶವಿಲ್ಲ ಎಂದು ನಿರ್ವಾಹಕ ವಾದಿಸುತ್ತಿದ್ದರೆ, ಈ ರೂಲ್ಸ್ ಬಗ್ಗೆ ಅರಿವಿಲ್ಲದ ಕೂಲಿ ಕಾರ್ಮಿಕ ಗಲಿಬಿಲಿಗೊಂಡಿದ್ದು, ಆತ ತಾನು ಇಳಿಯೋದಿಲ್ಲ ಎಂದು ಹೇಳಿದ್ದಾನೆ.
ನಂತರ ಇವರಿಬ್ಬರ ನಡುವೆ ವಾಗ್ವಾದ ನಡೆದು, ನಿರ್ವಾಹಕ ಪ್ರಯಾಣಿಕನಿಗೆ ತನ್ನ ಬಾಯಿಯಿಂದ ಕೆಟ್ಟ ಶಬ್ದಗಳಿಂದ ನಿಂದಿಸಿರುವ ಘಟನೆ ಕೂಡಾ ನಡೆದಿದೆ. ಕೊನೆಗೆ ಪ್ರಯಾಣಿಕ ಇಳಿಯದ್ದನ್ನು ಕಂಡ ಚಾಲಕ ಬಸ್ಸನ್ನು ಸೀದಾ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾನೆ.
ಈ ಸಂದರ್ಭದಲ್ಲಿ ಠಾಣೆಯಲ್ಲಿದ್ದ ಎಸ್.ಐ ರಾಮಕೃಷ್ಣ ಅವರು ನಿರ್ವಾಹಕ ಹಾಗೂ ಚಾಲಕ ಇಬ್ಬರಿಗೂ ಬುದ್ಧಿ ಮಾತನ್ನು ಹೇಳಿದ್ದಾರೆ.
ಕೋಳಿ, ಮೀನು ತರುವಂತಿಲ್ಲ;
ಕೆಎಸ್ಆರ್ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಅವರು ಬಸ್ನಲ್ಲಿ ಕೋಳಿ, ಮೀನು ಮಾಂಸ ತರುವಂತಿಲ್ಲ, ಜೀವ ಇರುವ ವಸ್ತು ತರಬಹುದು, ಮಾಂಸ ತಂದರೆ ಅದು ವಾಸನೆ ಬರುತ್ತದೆ. ಇದು ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ನಿಗಮ ಆದೇಶ ಮಾಡಿದೆ ಎಂದು ಹೇಳಿದ್ದಾರೆ.
ಇತ್ತ ಪ್ರಯಾಣಿಕ ಮಾತ್ರ ಒಂದು ಕೆ.ಜಿ. ಕೋಳಿಗೋಸ್ಕರ ಕಾರು, ರಿಕ್ಷಾದಲ್ಲಿ ಹೋಗಬೇಕಾ? ಬಡವರು ನಾವು, ನಾವು ಕೋಳಿ ಮಾಂಸ ತಂದರೆ ಪೊಲೀಸ್ ಠಾಣೆಗೆ ಕರೆದುಕೊಡು ಹೋಗುವುದು ಸರಿಯಾ? ಕೂಲಿ ಕಾರ್ಮಿಕರು ಬಸ್ನಲ್ಲಿ ಮಾಂಸ, ಮೀನು ಕೊಂಡು ಹೋಗಲು ಅವಕಾಶವಿಲ್ಲ ಎಂದಾದರೆ ಕೊಂಡುಹೋಗುವುದಾದರೂ ಹೇಗೆ? ಎಂಬ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: BPL Card ಸೇರಿ ಪಡಿತರ ಚೀಟಿ ಹೊಂದಿರುವವರಿಗೆ ಸರಕಾರದಿಂದ ಮತ್ತೊಂದು ಸಿಹಿ ಸುದ್ದಿ! ಸಿಗಲಿದೆ ನಿಮಗೆ ಇನ್ನು ರಸೀದಿ!!!
