ZP TP Elections: ಕರ್ನಾಟಕದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ (Panchayath elections)ಚುನಾವಣೆಯನ್ನು ಎರಡೂವರೆ ವರ್ಷವೇ ಕಳೆದಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಈ ವರ್ಷದಲ್ಲೇ ನಡೆಸಬೇಕು ಎಂದು ನಿರ್ಧರಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಈಗ ಈ ಚುನಾವಣೆಗಳನ್ನು (ZP TP Elections)ಲೋಕಸಭಾ ಚುನಾವಣೆ ಬಳಿಕ ನಡೆಸಲು ತೀರ್ಮಾನ ಕೈಗೊಂಡಿದೆ.
ರಾಜ್ಯದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ನೆರವಾಗುವಂತೆ ನಾಲ್ಕು ವಾರಗಳಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿಯನ್ನು ಅಂತಿಮಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ತಾಪಂ ಮತ್ತು ಜಿಪಂ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಇಡೀ ರಾಜ್ಯದಲ್ಲಿ ಬರಗಾಲವಿದ್ದು, ಒಂದು ವೇಳೆ ಚುನಾವಣೆ ನಡೆಸಿದರೆ ಹಿನ್ನೆಡೆ ಎಂದು ಭಾವಿಸಿರುವ ಸರ್ಕಾರ ಇದು ಸೂಕ್ತ ಸಮಯವಲ್ಲ ಎಂದು ಅಂದಾಜಿದೆ ಎನ್ನಲಾಗಿದೆ. ಈ ಚುನಾವಣೆಗಳನ್ನು ನಡೆಸಲು ಎದುರಾಗಿದ್ದ ಅಡ್ಡಿ ನಿವಾರಣೆ ಆದರೂ ಕೂಡ ಸರ್ಕಾರ ಚುನಾವಣೆ ನಡೆಸಲು ಸಿದ್ದವಿಲ್ಲ. ಪಂಚಾಯತ್ ರಾಜ್ ಕ್ಷೇತ್ರ ಪುನರ್ ವಿಂಗಡನೆ ಆಯೋಗದ ಅಧ್ಯಕ್ಷ ಎಂ.ಆರ್.ಕಾಂಬ್ಳೆ ಅವರು ಕ್ಷೇತ್ರ ವಿಂಗಡಣೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. 1,118 ಜಿಲ್ಲಾ ಪಂಚಾಯತ್ ಮತ್ತು 31 ಜಿಲ್ಲೆ ಮತ್ತು 236 ತಾಲ್ಲೂಕುಗಳಲ್ಲಿ 3,671 ತಾಲ್ಲೂಕು ಪಂಚಾಯತ್ ಕ್ಷೇತ್ರಗಳನ್ನು ಅಂತಿಮ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಕಾಂಬ್ಳೆ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಅಂತಿಮ ಅಧಿಸೂಚನೆಯನ್ನು ಹೊರಡಿಸಲಿದೆ. ಸರ್ಕಾರ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಬರ ಪರಿಹಾರ ಕಾಮಗಾರಿಗಳೂ ಅಂದುಕೊಂಡ ರೀತಿಯಲ್ಲಿ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿದರೂ ಗ್ರಾಮೀಣ ಪ್ರದೇಶದ ಜನರು ಮತ್ತು ರೈತರರಿಗೆ ನೂರರಷ್ಟು ನ್ಯಾಯ ಒದಗಿಸಲು ಸಾಧ್ಯವಿಲ್ಲ. ಜಿಪಂ, ತಾಪಂ ಮತ್ತು ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನ ಕೈಗೊಂಡಿದೆ. ಚುನಾವಣೆಗಳಲ್ಲಿ ಐದು ಗ್ಯಾರಂಟಿಗಳ ಜಾರಿಯ ಬೆಂಬಲದ ಜೊತೆಗೆ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸುವ ವಿಶ್ವಾಸವಿತ್ತು. ಆದರೆ ಆಡಳಿತಾರೂಢ ನಾಯಕರಲ್ಲಿ ಆತ್ಮವಿಶ್ವಾಸದ ಕೊರತೆ ಎದುರಾಗಿದೆ.
ಇದನ್ನೂ ಓದಿ: Udupi: ಉಡುಪಿಯಲ್ಲಿ ಭೀಕರ ಕೊಲೆ; ನಾಲ್ವರ ಬರ್ಬರ ಹತ್ಯೆ!!!
