Prabhas Astrology: ಟಾಲಿವುಡ್ ನಟ ಪ್ರಭಾಸ್ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ (Prabhas Astrology) ನುಡಿದು ಪೇಚಿಗೆ ಸಿಲುಕಿಕೊಂಡಿದ್ದಾರೆ.
ಈಗಾಗಲೇ ನಟ ಪ್ರಭಾಸ್‌ಗೀಗ 44 ವರ್ಷ. ಆದರೆ ಈ ವರೆಗೂ ಇವರ ಬಾಯಿಂದ ಮದುವೆ ವಿಷಯ ಪ್ರಸ್ತಾಪವಾಗಿಲ್ಲ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಮದುವೆ ಯಾವಾಗ? ಪ್ರಶ್ನೆಗಳು ಹರಿದಾಡುತ್ತಲೇ ಇರುತ್ತವೆ.
ಇದೀಗ ಇದೇ ಪ್ರಭಾಸ್ ಮದುವೆ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಸಂದರ್ಶನವೊಂದರಲ್ಲಿ ಭಾಗವಹಿಸಿ, ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆಯಾಗಲ್ಲ. ಅವರಿಗೆ ಮದುವೆ ಯೋಗವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸಿನಿಮಾ ವಿಚಾರದಲ್ಲೂ ಅವರ ಪ್ರಭಾವ ಕುಸಿಯಲಿದೆ ಎಂದೂ ಹೇಳಿ ಪ್ರಭಾಸ್ ಅಭಿಮಾನಿಗಳನ್ನು ಕೆಣಕಿದ್ದಾರೆ.
ಜ್ಯೋತಿಷಿ ವೇಣು ಸ್ವಾಮಿ ಸಿನಿಮಾ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಮತ್ತು ಜಾತಕದ ಬಗ್ಗೆ ಮಾತನಾಡುವ ಮೂಲಕವೇ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ಇಬ್ಬರ ನಡುವೆ ಡಿವೋರ್ಸ್ ಆಗಲಿದೆ ಎಂದು ವೇಣು ಸ್ವಾಮಿ ಹೇಳಿದ್ದರು. ಅದು ನಿಜವಾಗುತ್ತಿದ್ದಂತೆ, ಇವರು ಹೇಳುವ ಭವಿಷ್ಯದ ಮೇಲೆ ಎಲ್ಲರಿಗೂ ಕುತೂಹಲ ಹೆಚ್ಚಿದೆ.
ಇನ್ನು ಪ್ರಭಾಸ್ ಅವರ ಮದುವೆ ವಿಚಾರವಷ್ಟೇ ಅಲ್ಲದೆ, ಸಿನಿಮಾ ವೃತ್ತಿ ಜೀವನದ ಬಗ್ಗೆಯೂ ವೇಣು ಸ್ವಾಮಿ ಹೇಳಿದ್ದಾರೆ. ಪ್ರಭಾಸ್ ಅವರು ವೃತ್ತಿ ಜೀವನವನ್ನು ಸುಗಮವಾಗಿ ಮುನ್ನಡೆಸುವುದು ಕಷ್ಟ ಎಂದಿದ್ದಾರೆ. ಯಾಕೆಂದರೆ ‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ ಸಿನಿಮಾಗಳ ಬಳಿಕ ಪ್ರಭಾಸ್ ಚಿತ್ರಗಳು ಯಶಸ್ಸು ಗಳಿಸಲಿಲ್ಲ. ‘ಸಾಹೋ’ ಚಿತ್ರವು ಹೀನಾಯ ಸೋಲುಂಡಿತು. ‘ರಾಧೆ ಶ್ಯಾಮ್’ ಮತ್ತು ‘ಆದಿಪುರುಷ’ ಚಿತ್ರಗಳೂ ಪ್ಲಾಪ್ ಆದವು. ಇದೀಗ ಸಲಾರ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ.
ಈ ಎಲ್ಲಾ ಹೇಳಿಕೆ ಕೇಳಿದ ಪ್ರಭಾಸ್ ಅಭಿಮಾನಿ ಗಳು, ನೆಚ್ಚಿನ ನಟನ ಬಗ್ಗೆ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಜ್ಯೋತಿಷಿ ವಿರುದ್ಧವೇ ಕಿಡಿ ಕಾರುತ್ತಿದ್ದಾರೆ. ನಿಮ್ಮ ಭವಿಷ್ಯ ಸುಳ್ಳಾಗಲಿದೆ. ಪ್ರಭಾಸ್ ಖಂಡಿತಾ ಮದುವೆ ಆಗಲಿದ್ದಾರೆ. ಸಲಾರ್ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಕಿಡಿ ಕಾರಿದ್ದಾರೆ.
