Bengaluru News: ಹೆತ್ತು ಹೊತ್ತು ಸಾಕಿದ ಆ ತಾಯಿಯನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗಳೇ ಕಾರಲ್ಲಿ ಕಳ್ಳರಂತೆ ಬಂದು ಕೊರೆಯುವ ಚಳಿಯಲ್ಲಿ ಆ ವಯಸ್ಸಾದ ವೃದ್ಧೆಯನ್ನು ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟು ಹೋಗಿರುವ ಘಟನೆಯೊಂದ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ. ಈ ದುಷ್ಕೃತ್ಯದ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತಾಯಿ ಗ್ರೇಸಿ ಪೀಟರ್ (80 ವರ್ಷ) ಅವರ ಮಗಳು ಅಳಿಯನೇ ಈ ಕೃತ್ಯ ಮಾಡಿದವರು. ಹೆತ್ತ ತಾಯಿಯನ್ನು ಬೀದಿಪಾಲು ಮಾಡಿದವರು.
ಮಗಳು ಆಶಾರಾಣಿ, ಅಳಿಯ ಮಂಜುನಾಥ ಜೊತೆ ಇವರು ವಾಸವಿದ್ದರು. ದಿನನಿತ್ಯ ಕುಡಿದು ಅಳಿಯ ಮಂಜುನಾಥ್ ಮನೆಗೆ ಬಂದು ಅತ್ತೆ ಗ್ರೇಸಿ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ವೃದ್ಧೆಯ ಕಾಲು ಕೂಡಾ ಮುರಿದಿದ್ದರು ಎಂದು ವರದಿಯಾಗಿದೆ. ಇದರಿಂದಾಗಿ ಆ ನೋವಿನಿಂದ ಆ ಜೀವ ನರಳಾಡುತ್ತಿತ್ತು. ನಿನ್ನೆ ಶುಕ್ರವಾರ ತಡರಾತ್ರಿ ವೃದ್ಧೆಯನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಬೆಳಗ್ಗೆ ದೇವಾಲಯಕ್ಕೆ ಬಂದ ಗ್ರಾಮಸ್ಥರು ಚಳಿಯಲ್ಲಿ ನಡುಗುತ್ತಿದ್ದ ವೃದ್ಧೆಯನ್ನು ಗಮನಿಸಿ ಆಟೋ ಮೂಲಕ ಬನ್ನೇರುಘಟ್ಟದ ಏರ್ ಹ್ಯೂಮಾನಿಟರೇನಿಯನ್ ಹೋಮ್‌ಗೆ ಕಳುಹಿಸಿದ್ದಾರೆ. ಇದೀಗ ಹಿರಿಜೀವ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
