Vegetable Cart: ಹರ್ಯಾಣದ ಅಂಬಾಲಾದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಆಸ್ಪತ್ರೆಯ ಸಿಬ್ಬಂದಿಗಳು ತೋರಿದ ನಿರ್ಲಕ್ಷಕ್ಕೆ ಗರ್ಭಿಣಿಯೊಬ್ಬರು(Pregnant woman)ಮೈ ಕೊರೆವ ಚಳಿಯಲ್ಲಿ ಆಸ್ಪತ್ರೆಯ ಆವರಣದ ತರಕಾರಿ ಗಾಡಿಯಲ್ಲೇ(Vegetable Cart) ಮಗುವಿಗೆ ಜನ್ಮವಿತ್ತ ದಾರುಣ ಘಟನೆ ವರದಿಯಾಗಿದೆ.
ಹರ್ಯಾಣದ ಅಂಬಾಲಾದ ಸರ್ಕಾರಿ ಜಿಲ್ಲಾ ಆಸ್ಪತ್ರೆ ಬಳಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಕೆಯ ಪತಿ ಆಸ್ಪತ್ರೆವರೆಗೂ ಕರೆ ತಂದಿದ್ದಾರೆ.ಮಹಿಳೆ ಹಾಗೂ ಆಕೆಯ ಪತಿ ಆಸ್ಪತ್ರೆ ವೈದ್ಯರ ಜೊತೆಗೆ ಸಿಬ್ಬಂದಿಗಳ ಬಳಿ ಆಸ್ಪತ್ರೆಗೆ ದಾಖಲು ಮಾಡುವಂತೆ ಬೇಡಿಕೊಂಡರು ಕೂಡ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎನ್ನಲಾಗಿದೆ. ಒಬ್ಬ ಸಿಬ್ಬಂದಿಯೂ ಸ್ಟ್ರೆಚರ್ ತರಲು ಮುಂದಾಗಲಿಲ್ಲ ಎಂದು ಗರ್ಭಿಣಿ ಮಹಿಳೆಯ ಪತಿ ಆರೋಪಿಸಿದ್ದಾರೆ. ಕೊನೆಗೆ ಗರ್ಭಿಣಿ ವಿಧಿಯಿಲ್ಲದೆ ಅಲ್ಲೇ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ತರಕಾರಿ ಗಾಡಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದೆ ಎನ್ನಲಾಗಿದೆ.
ಈ ಸುದ್ದಿ ಹರಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆಸ್ಪತ್ರೆ ಆಡಳಿತ ಮಂಡಳಿ ಕೂಡಲೇ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆಗೆ ಮುಂದಾಗಿದೆ, ಜೊತೆಗೆ ಘಟನೆಯ ವಿವರ ಪಡೆದುಕೊಂಡ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
