Rameshwaram Cafe Blast: ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಸುಳಿವುಗಳನ್ನು ಪಡೆದುಕೊಂಡಿದೆ. ಪ್ರಕರಣದ ಶಂಕಿತನ ಮುಖ ಬೆಳಕಿಗೆ ಬಂದಿದ್ದು, ಆತನ ಪತ್ತೆಗಾಗಿ ತಂಡ ವಿವಿಧೆಡೆ ದಾಳಿ ನಡೆಸುತ್ತಿದೆ. ಇದಲ್ಲದೆ, ಈ ಶಂಕಿತನ ಕೆಲವು ಸಹಚರರನ್ನು ಸಹ ಗುರುತಿಸಲಾಗಿದೆ.
ಇದನ್ನೂ ಓದಿ: BJP: ಚುನಾವಣೆ ಹೊತ್ತಲ್ಲೇ ‘ಕಮಲ’ ಪಡೆಗೆ ದೊಡ್ಡ ಆಘಾತ – ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಪ್ರಬಲ ಸಂಸದ !!
ಶುಕ್ರವಾರ ಮತ್ತು ಶನಿವಾರದಂದು NIA ಬಿಡುಗಡೆ ಮಾಡಿದ ಹೊಸ ಸಿಸಿಟಿವಿ ಸ್ಟಿಲ್ ಚಿತ್ರಗಳಲ್ಲಿ, ಶಂಕಿತ ವ್ಯಕ್ತಿ ಟೋಪಿ ಇಲ್ಲದೆ ಕಾಣಿಸಿಕೊಂಡಿದ್ದಾನೆ. ತನಿಖೆಯ ವೇಳೆ, ಶಂಕಿತ ಆರೋಪಿಯು ಬಳ್ಳಾರಿ ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸ್ಫೋಟಗೊಂಡ ದಿನದ ಸಂಜೆಯ ದೃಶ್ಯವಾಗಿತ್ತು ಎಂದು ಹೇಳಲಾಗಿದೆ. ಅಲ್ಲಿಂದ ಆತ ಒಂದು ಆಟೋ ಬಾಡಿಗೆ ಪಡೆದು ಹೋಗಿದ್ದು, ನಂತರ ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡುತ್ತಿರುವುದು ಕೂಡಾ ಸಿಸಿಟಿಯಲ್ಲಿ ಕಂಡಿದೆ ಎಂದು ಹೇಳಲಾಗಿದೆ.
ಈ ಇಬ್ಬರು ಕಲಬುರಗಿ (ಗುಲ್ಬರ್ಗಾ) ಮೂಲದವರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಕೆಎ 32 ಎಫ್ 1885 ನಂಬರ್ ಬಸ್ ನಲ್ಲಿ ಬಳ್ಳಾರಿಯಿಂದ ಕಲಬುರಗಿಗೆ ತೆರಳಿದ್ದರು. ಅದರಲ್ಲಿ ಒಬ್ಬ ಕಲಬುರಗಿಯ ರಾಮಮಂದಿರ ವೃತ್ತದಲ್ಲಿ ಇಳಿದಿದ್ದು, ಮತ್ತೊಬ್ಬ ಸಿಟಿ ಬಸ್ ನಿಲ್ದಾಣದಲ್ಲಿ ಇಳಿದಿರುವುದು ಪತ್ತೆಯಾಗಿದೆ. ಸದ್ಯ ಎನ್‌ಐಎ ತಂಡ ಕಲಬುರಗಿಯಲ್ಲಿದ್ದು, ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತಿತರ ಸ್ಥಳಗಳ ಸಿಸಿಟಿವಿಗಳನ್ನು ಸ್ಕ್ಯಾನ್ ಮಾಡುತ್ತಿದೆ.
