Polinkana Utsava: ಮುಂಗಾರು ಮಳೆ ಆರಂಭವಾಗಿ ತನ್ನ ರೌದ್ರತೆಯನ್ನು ಪಡೆದುಕೊಳ್ಳುತ್ತಿದ್ದಂತೆ ಕಾವೇರಿ ನದಿ ಉಕ್ಕಿ ಹರಿಯಲು ಆರಂಭಿಸುತ್ತಾಳೆ. ತನ್ನ ರೌದ್ರ ಅವತಾರಕ್ಕೆ ನದಿ, ಕೊಳ್ಳಗಳು ತುಂಬಿ ಹರಿಯಲಾರಂಭಿಸುತ್ತದೆ. ಪ್ರವಾಹದ ಭೀತಿ ಎದುರಾಗುತ್ತದೆ. ನೆರೆ ಬಂದು ಜನರ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಾಳೆ. ಈ ರೀತಿಯಾಗಿ ಉಗ್ರ ರೂಪ ತಾಳಿದಾಗ ಶಾಂತಗೊಳಿಸಲು ಅವಳನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಗುತ್ತದೆ. ಅದು ಪ್ರತಿ ವರ್ಷ ಕಕ್ಕಡ ಮಾಸದ ಆಟಿ ಅಮಾವಾಸ್ಯೆಯಂದು ಭಾಗಮಂಡಲದಲ್ಲಿ ನಡೆಯುತ್ತದೆ. ಇದನ್ನು ಪೊಲಿಂಕಾನ ಉತ್ಸವ ಎಂದು ಕರೆಯಲಾಗುತ್ತದೆ.
ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಈ ಉತ್ಸವವನ್ನು ಮಾಡುಲಾಗುತ್ತದೆ. ಊರಿನ ಜನ ಎಲ್ಲಾ ಸೇರಿ ಶ್ರದ್ಧಾ ಭಕ್ತಿಯಿಂದ ಪೊಲಿಂಕಾನ ಉತ್ಸವ ಮಾಡುತ್ತಾರೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ ದೇವರಿಗೂ ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ಇದಾದ ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಂಗಳವಾದ್ಯದೊಂದಿಗೆ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪೂಜೆ ನೆರವೇರಿಸಲಾಗುತ್ತದೆ..
ಈ ಬಾರಿ ಕೊಡಗಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಹಾಗಾಗಿ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಷ್ಟೆ ಅಲ್ಲದೆ ಅಪಾರ ಆಸ್ತಿಪಾಸ್ತಿ ಕೂಡ ನಾಶ ಮಾಡಿ ಹಲವು ಅನಾಹುತಗಳನ್ನು ಸೃಷ್ಟಿಸಿ ಜನರರಿಗೆ ಸಂಕಷ್ಟ ತಂದಿದ್ದಾಳೆ. ಇಲ್ಲಿಗೆ ತನ್ನ ರೌದ್ರ ನರ್ತನವನ್ನು ನಿಲ್ಲಿಸುವ ಹಾಗೆ ಕಾಣಿಸುತ್ತಿಲ್ಲ. ಮತ್ತೆ ಮಳೆ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿದೆ. ಹಾಗಾಗಿ ಕಾವೇರಿ ಮತ್ತೆ ಪ್ರವಾಹ ಸೃಷ್ಟಿಸುವ ಸಾಧ್ಯತೆ ಇರೋ ಕಾರಣ ಅವರಳನ್ನು ಶಾಂತಗೊಳ್ಳುವಂತೆ ಕೊಡಗಿನ ಜನತೆ ಇಂದು ಪ್ರಾರ್ಥನೆ ಮಾಡುವ ಮೂಲಕ ಪೊಲಿಂಕಾನ ಉತ್ಸವ ಆಚರಿಸಿದರು.
ನಂತರ ತ್ರಿವೇಣಿ ಸಂಗಮದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಹಚ್ಚಿದ ದೀಪ ಹಾಗೆಯೇ ಉರಿಯುತ್ತಾ ನೀರುನಲ್ಲಿ ತೇಲುತ್ತಾ ಮುಂದೆ ಹೋಗುತ್ತದೆ. ಅಲ್ಲಿ ಸೇರಿದ ಸಮಸ್ತ ಭಕ್ತರು ನಾಡಿಗೆ ಸಮೃದ್ದಿ ಬರಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸುತ್ತಾರೆ. ಈ ಉತ್ಸವವನ್ನು ಪ್ರತಿವರ್ಷ ನಡೆಸಲಾಗುತ್ತದೆ.
