Food: ಆಧುನಿಕ ಯುಗದಲ್ಲಿ ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಜನರಿಗೆ ಅಡುಗೆ ಮಾಡುವುದಕ್ಕೆ ಸಮಯವಿರುವುದಿಲ್ಲ. ಆದ್ದರಿಂದ ಎರಡು ಮೂರು ಹೊತ್ತಿಗಾಗುವಷ್ಟು ಅಥವಾ ಎರಡು ಮೂರು ದಿನಗಳಿಗಾಗುವಷ್ಟು ಪದಾರ್ಥಗಳನ್ನು ತಯಾರಿಸಿ ಫ್ರೀಜ್(ತಂಗಳು ಡಬ್ಬಿ)ಯಲ್ಲಿಟ್ಟು ಅಗತ್ಯವಿದ್ದಾಗಲೆಲ್ಲ ಬಳಸುತ್ತಾರೆ.
ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಬಹಳಷ್ಟು ಜನ ಆರ್ಥಿಕವಾಗಿ ಸಬಲರಾಗಿರಲಿಲ್ಲ ಹಾಗೂ ಇಂದಿನಷ್ಟು ಆರೋಗ್ಯದ ಜ್ಞಾನ ಸಾಮಾನ್ಯ ಜನರಿಗೆ ಇರಲಿಲ್ಲ. ಆದ್ದರಿಂದ, ಹೆಚ್ಚಿನ ಜನರು ತಂಗಳು ಆಹಾರವನ್ನು ಕೂಡ ಸೇವಿಸುವ ವಾಡಿಕೆ ಇತ್ತು. ಅಂದರೆ ಬೆಳಗ್ಗೆ ಮಿಕ್ಕ ಆಹಾರ ರಾತ್ರಿ ಮತ್ತು ರಾತ್ರಿಯ ಉಳಿದ ಆಹಾರ ಬೆಳಿಗ್ಗೆ ಸೇವಿಸುವುದು ಸಾಮಾನ್ಯವಾಗಿತ್ತು. ಆದರೆ ಈಗಿನ ಕಾಲದಲ್ಲಿ ಪ್ರತಿ ಬಾರಿ ತಾಜಾ ಅಡುಗೆ ಮಾಡಿ ಉಣ್ಣುತ್ತಾರೆ ಅಥವಾ ಆಹಾರವನ್ನು ಫ್ರಿಜ್ಜಿನಲ್ಲಿಟ್ಟು ಅಗತ್ಯವಿದ್ದಾಗ ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಒಮ್ಮೆ ತಯಾರಿಸಿದ ಆಹಾರವನ್ನು ಮೂರು ನಾಲ್ಕು ದಿನಗಳ ವರೆಗೂ ಬಳಸಲಾಗುತ್ತದೆ.
ಫ್ರಿಡ್ಜ್ ಇಲ್ಲದಿದ್ದರೆ ಅಥವಾ ಫ್ರಿಜ್ಜಿನಲ್ಲಿನ ಆಹಾರ ಬೇಡವಾಗಿದ್ದರೆ ಜನ ತಂಗಳು ಆಹಾರವನ್ನು ಎಸೆದು ಬಿಡುತ್ತಾರೆ. ಏಕೆಂದರೆ, ತಂಗಳು ಆಹಾರ ಸೇವಿಸುವುದು ಹಿತಕರವಲ್ಲ. ಅದರಲ್ಲಿ ಜೀವಾಣುಗಳು ಬೆಳೆದು ಸೋಂಕುಗಳಿಂದ ಅನಾರೋಗ್ಯ ಉಂಟಾಗುವ ಸಂಭವವಿರುತ್ತದೆ. ಜೊತೆಗೆ ತಂಗಳು ಆಹಾರದಲ್ಲಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಕೆಲವು ಸ್ಥಿತಿವಂತರಿಗೆ ತಂಗಳು ಆಹಾರ ಸೇವಿಸುವುದು, ಪ್ರತಿಷ್ಠೆಗೆ ಕುಂದು ತರುವ ಸಂಗತಿ ಆಗಿರುತ್ತದೆ. ಆದರೆ, ಆಧುನಿಕ ವೈಜ್ಞಾನಿಕ ಯುಗದಲ್ಲಿ ಜನರಿಗೆ ತಂಗಳು ಆಹಾರ ಸೇವಿಸುವುದು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು ಎಂಬ ಅರಿವು ಇಲ್ಲ. ಅನ್ನ, ರೊಟ್ಟಿ, ರಾಗಿ ಮುದ್ದೆ ಇತ್ಯಾದಿಗಳನ್ನು ತಂಗಳೆಂದು ಎಸೆಯದೆ ಸೇವಿಸುವುದು ಲಾಭಕಾರಿಯಾಗಿರುತ್ತದೆ! ಹೌದು, ಅನೇಕರಿಗೆ ಆಶ್ಚರ್ಯವೆನಿಸಬಹುದು, ಕೆಲವರು ಮೂಗು ಮುರಿಯಬಹುದು. ಆದರೆ ಇದು ವಾಸ್ತವ.
ತಂಗಳು ಆಹಾರ ಸೇವಿಸುವುದರ ಪ್ರಯೋಜನಗಳಾದರೂ ಏನು?
ಸೂಕ್ತ ಪದ್ಧತಿಯಲ್ಲಿ ಶೇಖರಿಸಿಟ್ಟ ತಂಗಳು ಆಹಾರವನ್ನು ಸೂಕ್ತ ರೀತಿಯಲ್ಲಿ ಬಳಸುವುದರಿಂದ ಈ ಕೆಳಗಿನ ಪ್ರಯೋಜನಗಳಿವೆ.
ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ
ಜೀರ್ಣಕ್ರಿಯೆ ಸುಧಾರಿಸುತ್ತದೆ
ಆಮ್ಲಿಯತೆ (ಎಸಿಡಿಟಿ) ಕಡಿಮೆಯಾಗುತ್ತದೆ
ಮಧುಮೇಹ, ರಕ್ತ ಒತ್ತಡ ಇತ್ಯಾದಿ ರೋಗಗಳನ್ನು ನಿಯಂತ್ರಿಸಬಹುದು
ಮಲಬದ್ಧತೆ ಕಡಿಮೆಯಾಗುತ್ತದೆ
ರೋಗ ಪ್ರತಿರೋಧ ಶಕ್ತಿ ಹೆಚ್ಚುತ್ತದೆ
ರಕ್ತ ಹೀನತೆಯನ್ನು ತಡೆಗಟ್ಟಬಹುದು
ವಿಟಮಿನ್ ಬಿ12 ಕೊರತೆಯನ್ನು ನೀಗಿಸಬಹುದು
ತಂಗಳು ಆಹಾರದ ಪ್ರಯೋಜನಗಳು ಆಯಾ ಪದಾರ್ಥಗಳನ್ನು ಹಾಗೂ ಅವುಗಳನ್ನು ಬಳಸುವ ವಿಧಾನಗಳನ್ನು ಅವಲಂಬಿಸಿರುತ್ತದೆ.
ಅನ್ನ
ರಾತ್ರಿ ಮಿಕ್ಕ ಅನ್ನವನ್ನು ಮಣ್ಣಿನ ಮಡಿಕೆಯಲ್ಲಿ ನೀರು ಬೆರೆಸಿ ಇಡಬೇಕು. ಮಾರನೇ ದಿನ ಆಹಾರದ ಬದಲಿಗೆ ಇದನ್ನು ಸೇವಿಸಿ. ಗಂಜಿಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣ ಮತ್ತು ಕ್ಯಾಲ್ಷಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಶಕ್ತಿ ಹಾಗೂ ದೇಹವನ್ನು ತಂಪಾಗಿರಿಸಲು ಕೂಡ ಸಹಾಯವಾಗುತ್ತದೆ. ಗಂಟಲು ನೋವು, ಚರ್ಮದ ಸುಕ್ಕನ್ನು ತಡೆಯುತ್ತದೆ, ದೇಹವು ಸದೃಢ ಮತ್ತು ಶಕ್ತಿಯುತವಾಗುತ್ತದೆ, ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟುತ್ತದೆ, ಅಲರ್ಜಿ ಅಲ್ಸರ್ ಗಳನ್ನು ತಡೆಗಟ್ಟುತ್ತದೆ, ಬೇಗ ಹಸಿವು ಆಗುವುದಿಲ್ಲ, ಬೊಜ್ಜು ಬೆಳೆಯುವುದಿಲ್ಲ, ಸಕ್ಕರೆ ಕಾಯಿಲೆ ಎಂಬುದು ಹತ್ತಿರವೂ ಸುಳಿಯುವುದಿಲ್ಲ. ಇಷ್ಟೆಲ್ಲ ಲಾಭ ನಿಮಗೆ ಉಪಾಹಾರ ಸೇವಿಸುವುದರಿಂದಲೂ ಸಿಗುವುದಿಲ್ಲ.
ರಾಗಿ ಮುದ್ದೆ
ರಾಗಿ ಒಂದು ಪೌಷ್ಟಿಕ ಧಾನ್ಯ. ರಾತ್ರಿ ಉಳಿದ ರಾಗಿ ಮುದ್ದೆಯನ್ನು ಅಂಬಲಿ ಮಾಡಿ ಕುಡಿಯುವ ರೂಢಿ ಇನ್ನೂ ಕೆಲವು ಹಳ್ಳಿಗಳಲ್ಲಿ ಇದೆ. ರಾಗಿ ಅಂಬಲಿ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ರಾತ್ರಿ ಉಳಿದ ರಾಗಿ ಮುದ್ದೆಯನ್ನು ತೆಳುವಾದ ಮಜ್ಜಿಗೆಯಲ್ಲಿ ನೆನೆಸಿಡಿ, ಬೆಳಗ್ಗೆ ಇದನ್ನು ಚೆನ್ನಾಗಿ ಕಿವಿಚಿ ಈರುಳ್ಳಿ, ಹಸಿ ಮೆಣಸಿನಕಾಯಿ, ಉಪ್ಪು, ಜೀರಿಗೆ ಸೇರಿಸಿ ಕುಡಿಯಿರಿ. ಈ ರೀತಿಯಾಗಿ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ.
ಮೂಳೆಗಳನ್ನು ಬಲಪಡಿಸುತ್ತದೆ. ಹೆಚ್ಚು ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ಮಕ್ಕಳಿಗೆ ಮತ್ತು ವೃದ್ಧರಿಗೆ ಅವಶ್ಯಕವಾಗಿರುವ ಕೆಲವು ಮುಖ್ಯ ಪೋಷಕಾಂಶಗಳನ್ನು ಇದು ಹೊಂದಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ, ರಕ್ತಹೀನತೆಯನ್ನು ಸರಿಪಡಿಸುತ್ತದೆ, ದೇಹವನ್ನು ತಂಪು ಗೊಳಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದರಲ್ಲಿರುವ ಪ್ರೋಟೀನ್ ಹಾಗೂ ವಿಟಮಿನ್ಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿಡುತ್ತದೆ, ರಾಗಿ ಮುದ್ದೆಯಲ್ಲಿರುವ ಫೈಬರ್ ಮಲಬದ್ಧತೆಯ ಸಮಸ್ಯೆಯನ್ನು ಸರಿಪಡಿಸುತ್ತದೆ, ದೇಹದ ತೂಕವನ್ನು ಇಳಿಸಲು ಇದು ತುಂಬಾನೇ ಸಹಾಯಕಾರಿ. ಹೀಗೆ ಇನ್ನೂ ಹಲವಾರು ಲಾಭ ನಮ್ಮ ದೇಹಕ್ಕೆ ಈ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಸಿಗುತ್ತದೆ.
ಚಪಾತಿ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿ ಮುಂಜಾನೆ ಸಮಯದಲ್ಲಿ ತಂಗಳ ಚಪಾತಿಯನ್ನು ತಣ್ಣನೇ ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು. ಇನ್ನು ಕೆಲವರು ಹೇಳುವಂತೆ ಚಪಾತಿಯು ಬೇಸಿಗೆ ಸಮಯದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದರೆ ತಂಗಳ ಚಪಾತಿ ಬೇಸಿಗೆ ಸಮಯದಲ್ಲಿ ಸೇವಿಸುವುದರಿಂದ ನಮ್ಮ ದೇಹದ ಉಷ್ಣತೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ತಂಗಳು ಚಪಾತಿಯನ್ನು ತಣ್ಣನೆ ಹಾಲಿನಲ್ಲಿ ಬೆರೆಸಿ ತಿನ್ನುವುದರಿಂದ ಸಿಗುವ ಲಾಭಗಳು: ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಆಮ್ಲೀಯತೆಯನ್ನು ಗುಣಪಡಿಸಿಕೊಂಡು ವ್ಯಕ್ತಿಯ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಕೂಡ ಸರಾಗವಾಗಿ ಸಾಗುವಂತೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ, ಇದು ನಮ್ಮ ಹೊಟ್ಟೆಯ ಹಲವಾರು ಸಮಸ್ಯೆಗಳನ್ನು ದೂರವಿಡಲು ಕೂಡ ಸಹಕರಿಸುತ್ತದೆ.
ರೊಟ್ಟಿ
ರಾತ್ರಿ ಉಳಿದ ರೊಟ್ಟಿಯನ್ನು ಬೆಳಗ್ಗೆ ಹಸಿ ಚಟ್ನಿ ಅಥವಾ ತಂಪು ಹಾಲಿನೊಂದಿಗೆ ಸೇವಿಸಬಹುದು. ಇದರಿಂದ ಮೇಲೆ ತಿಳಿಸಿದ ಚಪಾತಿಯ ಲಾಭಗಳು ಅಧಿಕ ಪ್ರಮಾಣದಲ್ಲಿ ದೊರೆಯುತ್ತವೆ.
ತಂಗಳು ಆಹಾರದ ಪ್ರಮುಖ ಲಾಭಗಳೇನು?:
ಆಹಾರವನ್ನು ಕೆಲವು ಗಂಟೆಗಳಮಟ್ಟಿಗೆ ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟಾಗ ಅದರಲ್ಲಿ ಉಪಯುಕ್ತ ಸೂಕ್ಷ್ಮಾಣುಗಳು ( ಪ್ರೊಬಯೋಟಿಕ್ಸ್ ಮತ್ತು ಪ್ರೀ ಬಯೋಟೆಕ್ಸ್ ) ಬೆಳೆಯುತ್ತವೆ. ಈ ಸೂಕ್ಷ್ಮಾಣುಗಳು ನಮ್ಮ ದೊಡ್ಡ ಕರುಳಿನಲ್ಲಿ ಸ್ವಾಭಾವಿಕವಾಗಿಯೇ ಇರುತ್ತವೆ. ಆದರೆ, ಇಂದಿನ ತಪ್ಪು ಜೀವನ ಶೈಲಿಯಿಂದಾಗಿ ಕರುಳಿನಲ್ಲಿ ಉಪಯುಕ್ತ ಸೂಕ್ಷ್ಮಾಣುಗಳ ಕೊರತೆ ಉಂಟಾಗುತ್ತಿದೆ. ಇದರಿಂದ, ರಕ್ತ ಹೀನತೆ, ಮಧುಮೇಹ, ಕ್ಯಾನ್ಸರ್, ರಕ್ತದ ಅಧಿಕ ಒತ್ತಡ, ಹೃದಯ ರೋಗಗಳು, ಮಲಬದ್ಧತೆ, ಅತಿಸಾರ, ಇತ್ಯಾದಿ ಕಾಯಿಲೆಗಳು ಸಂಭವಿಸುತ್ತವೆ. ತಂಗಳು ಆಹಾರವು ಈ ಕೊರತೆಯನ್ನು ನೀಗಿಸುವಲ್ಲಿ ಉಪಯುಕ್ತವಾಗಬಹುದು.
ಎರಡನೆಯದಾಗಿ, ತಂಗಳು ಆಹಾರದಲ್ಲಿನ ಸೂಕ್ಷ್ಮಾಣುಗಳ ಕಾರಣದಿಂದ ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತದೆ.
ಆದರೆ, ಜಾಗ್ರತೆ!… ತಂಗಳು ಆಹಾರವನ್ನು ಸೇವಿಸಬೇಕಾದರೆ ಕೆಲವು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇಲ್ಲವಾದರೆ, ಅದು ಹಾನಿಕಾರಕವಾಗಬಹುದು.
– ಮಿಕ್ಕ ಆಹಾರವನ್ನು ಶೇಖರಿಸಿಡುವಾಗ ಸಾಕಷ್ಟು ಸ್ವಚ್ಛತೆ ಮತ್ತು ಶುದ್ಧತೆಯ ಕ್ರಮಗಳನ್ನು ಅನುಸರಿಸಬೇಕು.
– ಆಹಾರವನ್ನು ಫ್ರಿಜ್ಜಿನಲ್ಲಿ ಇಡಬಾರದು
– ಆಹಾರವನ್ನು ಸರಿಯಾಗಿ ಮುಚ್ಚಿ ಇಡಬೇಕು
– ಹನ್ನೆರಡು ಗಂಟೆಗಳಿಗಿಂತ ಹೆಚ್ಚು ಕಾಲ ಶೇಖರಿಸಿಟ್ಟ ಆಹಾರವನ್ನು ಸೇವಿಸಬಾರದು. ಬೇಸಿಗೆಯಲ್ಲಿ 6 ರಿಂದ 8 ಗಂಟೆಗಳು ಮಾತ್ರ ಶೇಖರಿಸಿಡಬೇಕು.
– ತಂಗಳು ಆಹಾರವನ್ನು ಸೇವಿಸುವ ಮೊದಲು ಅದು ಹಳಸಿಲ್ಲ ಎಂಬುದನ್ನು ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಬೇಕು.
– ತಂಗಳು ಆಹಾರವನ್ನು ಬಿಸಿ ಮಾಡದೆ ಸೇವಿಸಬೇಕು.
– ತಂಗಳು ಆಹಾರದಿಂದ ಚಿತ್ರಾನ್ನ, ಮಾಲೇದಿ, ದೋಸೆ, ಇತ್ಯಾದಿ ಬೇರೆ ಪದಾರ್ಥಗಳನ್ನು ತಯಾರಿಸದೆ ಇದ್ದಂತೆಯೇ ಸೇವಿಸಬೇಕು.
– ತಂಗಳು ಆಹಾರದೊಂದಿಗೆ ಗ್ರೇವಿ, ಮಸಾಲೆಯುಕ್ತ ಪಲ್ಯ, ಸಾರು ಇತ್ಯಾದಿ ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು ಹಸಿ ಚಟ್ನಿ, ಹಾಲು, ಮಜ್ಜಿಗೆ ಇತ್ಯಾದಿ ಗಳೊಂದಿಗೆ ಮಾತ್ರ ಸೇವಿಸಬೇಕು.
ತಂಗಳು ಎಂಬ ಕೀಳು ಭಾವನೆ ಬೇಡ. ಆರೋಗ್ಯಕ್ಕೆ ಲಾಭಕಾರಿಯಾದ ತಂಗಳು ಆಹಾರ ತಿನ್ನುವುದರಿಂದ ಪ್ರತಿಷ್ಠೆಗೆ ಕುಂದು ಬರುವುದಿಲ್ಲ. ಜನ ಇಷ್ಟಪಟ್ಟು ತಿನ್ನುವ ಬ್ರೆಡ್, ಬಿಸ್ಕೆಟ್, ಮತ್ತೆ ಇತರ ಎಲ್ಲ ಪ್ಯಾಕ್ ಮಾಡಿದ ಆಹಾರಗಳು ವಾರಗಟ್ಟಲೆ/ತಿಂಗಳುಗಟ್ಟಲೆ ಶೇಖರಿಸಿದ ತಂಗಳು ಆಹಾರಗಳೆ ಆಗಿವೆ. ಈ ಆಹಾರಗಳನ್ನು ಪ್ರತಿಷ್ಠಿತರಿಂದ ಹಿಡಿದು ಎಲ್ಲರೂ ಸೇವಿಸುತ್ತಾರೆ! ಅವುಗಳನ್ನು ತಿನ್ನುವುದಕ್ಕಿಂತ ನಮ್ಮ ಪಾರಂಪರಿಕ ಪದ್ಧತಿಯ ತಂಗಳು ಆಹಾರ ಸೇವಿಸುವುದು ಹೆಚ್ಚು ಒಳ್ಳೆಯದು. ಆರೋಗ್ಯ ಕಾಪಾಡಲು ಹಳೆಯ ಕಾಲದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ. ಏಕೆಂದರೆ, ನಾವು ಹಳೇ ಸಂಪ್ರದಾಯಗಳನ್ನು ಬಿಟ್ಟಾಗಿನಿಂದಲೇ ಹೆಚ್ಚು ಅನಾರೋಗ್ಯಗಳು ಸಂಭವಿಸುತ್ತಿವೆ.
