Anna Bhagya: ಕರ್ನಾಟಕ ಸರ್ಕಾರ ‘ಅನ್ನಭಾಗ್ಯ’(Anna Bhagya) ಯೋಜನೆಯಡಿ ಫಲಾನುಭವಿಗಳಿಗೆ ಸದ್ಯ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ನೀಡುತ್ತಿದ್ದು, ಇನ್ನು ಮುಂದೆ ಇದನ್ನು ನಿಲ್ಲಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರ ಬದಲಿಗೆ ಬೇರೆಯೇ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದಾಗ ಪ್ರತಿ ಫಲಾನುಭವಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರೂ, ಕೇವಲ 5 ಕೆಜಿ ಅಕ್ಕಿಯನ್ನು ಮಾತ್ರ ಪೂರೈಸಲು ಸಾಧ್ಯವಾಗಿದ್ದು, ಉಳಿದ 5 ಕೆಜಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುತ್ತಿದೆ. ಆದರೆ ಇನ್ನು ಮುಂದೆ ಆ ಅಕ್ಕಿ ಹಣದ ಬದಲಿಗೆ ಎಣ್ಣೆ, ಬೇಳೆ, ಸಕ್ಕರೆ ಮತ್ತು ಇತರ ಆಹಾರ ಪದಾರ್ಥಗಳನ್ನು ನೀಡುವ ಸಾಧ್ಯತೆ ಇದೆ.
ಹೌದು, ಐದು ಕೆಜಿ ಅಕ್ಕಿ ಬದಲು ಬೇಳೆ ಕೊಡಲು ರಾಜ್ಯಸರ್ಕಾರ ಚಿಂತನೆ ನಡೆಸಿದ್ದು, ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯ ದುಡ್ಡಿನ ಬದಲು ಬೇಳೆ, ಉಪ್ಪು ಸಕ್ಕರೆ ಹಾಗೂ ಎಣ್ಣೆ ನೀಡುವಂತೆ ಆಹಾರ ಇಲಾಖೆ ನಡೆಸಿದ ಸರ್ವೆಯಲ್ಲಿ ಶೇಕಡಾ 93ರಷ್ಟು ಫಲಾನುಭವಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡಲು ಸಚಿವರು ಮುಂದಾಗಿದ್ದರಂತೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ(K H Muniyappa) ತಿಳಿಸಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ. ಅಕ್ಕಿ ಬದಲಿಗೆ ಬೇರೆ ಆಹಾರ ವಸ್ತುಗಳನ್ನು ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ(C M Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivkumar)) ಅವರೊಂದಿಗೆ ಚರ್ಚಿಸಿ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ಅಂದಹಾಗೆ ಮುನಿಯಪ್ಪ ಅವರು ದೆಹಲಿಯಲ್ಲಿ ಸಚಿವ ಪ್ರಲ್ಹಾದ್ ಜೋಶಿ(Prahalad Joshi)ಅವರನ್ನು ಭೇಟಿ ಮಾಡಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ವರ್ಷಕ್ಕೆ ಎಷ್ಟು ಅಕ್ಕಿ (Rice) ಬೇಕಾಗುತ್ತದೆ ಎಂಬುದನ್ನು ಅವರ ಮುಂದೆ ಪ್ರಸ್ತಾಪಿಸಿದ್ದಾರೆ. ರಾಜ್ಯಕ್ಕೆ ಬೇಕಾದ ಅಕ್ಕಿ ಸರಬರಾಜು ಕುರಿತು ಕೇಂದ್ರ ಸರ್ಕಾರದ (Union Govt) ಸಚಿವರನ್ನು ಭೇಟಿ ಸಚಿವರು ಚರ್ಚೆ ನಡೆಸಿದ್ದಾರೆ. ಈ ವೇಳೆ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅಕ್ಕಿ ಮಾರಾಟ ಮಾಡಲು ಒಪ್ಪಿಕೊಂಡಿದೆ. ಅಗತ್ಯ ಅಕ್ಕಿಯನ್ನು ನೀಡಲಾಗುತ್ತದೆ. ಮಾಸಿಕ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಹೀಗಾಗಿ ಕೇಂದ್ರ ನೀಡಲು ಆರಂಭಿಸಿದ ಕೂಡಲೇ ಫಲಾನುಭವಿಗಳಿಗೆ ಸಂಪೂರ್ಣ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆಂದು ಮುನಿಯಪ್ಪ ತಿಳಿಸಿದ್ದಾರೆ.
