Pared to Rajabhavan: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H D Kumaraswami), ಮಾಜಿ ಸಚಿವರಾದ ಜನಾರ್ದನ ರೆಡ್ಡಿ (Janardhan Reddy), ಮುರುಗೇಶ್ ನಿರಾಣಿ (Nirani), ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ರಾಜ್ಯಪಾಲರ (Governor) ಅನುಮತಿ ಕೋರಿ ಕಾಂಗ್ರೆಸ್ ಶಾಸಕರು (Congress MLA`s) ಆಗಸ್ಟ್ 31ರಂದು ರಾಜಭವನಕ್ಕೆ ಪೆರೇಡ್ (Raj Bhavan Pared)ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ(DCM) ಡಿ.ಕೆ.ಶಿವಕುಮಾರ್(D K Shivakumar), ಅಂದು ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿಯಿಂದ ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ಒತ್ತಾಯ ಮಾಡುತ್ತೇವೆ ಎಂದರು.
ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬೆಳಗ್ಗೆ 10ರಿಂದ 10-30 ನಡುವೆ ಪಕ್ಷದ ಎಲ್ಲಾ ಜನಪ್ರತಿನಿಧಿಗಳು ಒಟ್ಟಿಗೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಭೇಟಿಗೆ ಸಮಯಾವಕಾಶವನ್ನು ಕೋರಿ ಇಂದೇ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು. ನಮ್ಮ ಪರೇಡ್‌ನಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಆಗುವುದಿಲ್ಲ. ಕೇವಲ 250 ಮೀಟರ್ ನಡಿಗೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ. ಕುಮಾರಸ್ವಾಮಿ ಸೇರಿದಂತೆ ನಾಲ್ವರ ಬಗ್ಗೆ ವಿವಿಧ ಸಂಸ್ಥೆಗಳು ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ಅನುಮತಿ ಕೋರಿ ಪತ್ರ ಬರೆದಿವೆ ಎಂದರು.
ರಾಜ್ಯ ಸಚಿವ ಸಂಪುಟ ಕೂಡಾ ಇದೇ ವಿಷಯದಲ್ಲಿ ನಿರ್ಣಯ ಕೈಗೊಂಡು ರಾಜಭವನಕ್ಕೆ ಸರ್ಕಾರದ ವತಿಯಿಂದಲೇ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಉತ್ತರವಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ನಾವು ಮನವಿ ಮತ್ತು ಒತ್ತಾಯ ಮಾಡುತ್ತೇವೆ ಎಂದು ಶಿವಕುಮಾರ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ಮಾತನಾಡಿದ ಶಿವಕುಮಾರ್, ಕೇಂದ್ರದಲ್ಲಿ ಮಂತ್ರಿಯಾಗಿರುವ ಇವರಿಗೆ ಕಾನೂನಿನ ಅರಿವಿಲ್ಲವೇ? ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ್ದಾರೆ. ಸಾಯಿ ಮಿನರಲ್ಸ್ಗೆ ತಾವು ಅನುಮತಿ ನೀಡಿಲ್ಲ, ನನ್ನ ಸಹಿ ಫೋರ್ಜರಿ ಎಂಬುದಾಗಿ ಹೇಳುತ್ತಾರೆ ಎಂದು ಟೀಕಿಸಿದರು.
ಅವರ ಸಹಿ ಫೋರ್ಜರಿ ಆಗಿದ್ದರೆ, ಮುಖ್ಯಮಂತ್ರಿಗೋ ಇಲ್ಲವೇ ಒಬ್ಬ ಪೋಲಿಸ್ ಪೇದೆಗೋ ದೂರು ನೀಡಲಿ, ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ಯರ‍್ಯಾರು ಶಾಮೀಲಾಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೆ. ಯಾಕಪ್ಪಾ ಕುಮಾರಸ್ವಾಮಿ, ನಿನ್ನ ಸಹಿ ಫೋರ್ಜರಿ ಆಗಿದ್ದರೆ ಇದುವರೆಗೂ ಏಕೆ ದೂರು ನೀಡಿಲ್ಲ? ಎಲ್ಲಾ ಕಾನೂನು ನಿನ್ನ ಜೇಬಿನಲ್ಲೇ ಇದೆ ಎನ್ನುವ ನಿನಗೆ ಅಷ್ಟೂ ಪರಿಜ್ಞಾನವಿಲ್ಲವೇ ಎಂದು ವ್ಯಂಗ್ಯವಾಗಿಯೇ ಪ್ರಶ್ನಿಸಿದರು.
ಸಾಯಿ ಮಿನರಲ್ಸ್ಗೆ ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿರುವುದಾಗಿ ನ್ಯಾಯಾಲಯಕ್ಕೆ ನೀನೆ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಒಂದೆಡೆ ಹೇಳುತ್ತಿಯಾ. ಮತ್ತೊಂದೆಡೆ, ನಾನು ಶಿಫಾರಸ್ಸೇ ಮಾಡಿಲ್ಲ, ಸಹಿಯೇ ಮಾಡಿಲ್ಲ ಎನ್ನತ್ತೀಯಾ ಎಂದು ಶಿವಕುಮಾರ್ ದಾಖಲೆಗಳನ್ನು ಪ್ರದರ್ಶಿಸಿದರು. ನಾನು, ಈ ಹಿಂದೆ ನಿಮ್ಮ ಆಸ್ತಿ- ಪಾಸ್ತಿಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಇದುವರೆಗೂ ಉತ್ತರಿಸಿಲ್ಲ. ಆದರೆ, ನಮ್ಮ ಬಗ್ಗೆ ಮಾತ್ರ ಎಲ್ಲಾ ಕೆದಕುತ್ತಾ ಕೂರುವೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಸೇರಿದಂತೆ ವಿವಿಧ ಸಂಸ್ಥೆಗಳು ತನಿಖೆ ನಡೆಸಿ ವರದಿ ಸಲ್ಲಿಸಿವೆ.
ರಾಜ್ಯಪಾಲರು ತಕ್ಷಣವೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು, ಇದನ್ನು ಒತ್ತಾಯಿಸಲು ನಾವು ನಡಿಗೆ ಹಮ್ಮಿಕೊಂಡಿದ್ದೇವೆ ಎಂದರು. ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅವರ ಸಂಸ್ಥೆಗೆ ಭೂಮಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಈ ಕುರಿತು ಈಗ ತಮ್ಮ ಬಳಿ ದಾಖಲೆಗಳಿಲ್ಲ. ಮುಂದೆ ಉತ್ತರ ನೀಡುವುದಾಗಿ ನುಣಚಿಕೊಂಡರು.
