Ivan Disouza: ಮಂಗಳೂರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಜನಪ್ರತಿನಿಧಿಯೊಬ್ಬರ ಸರಕಾರಿ ಕಚೇರಿಗಾಗಿ ದುಂದುವೆಚ್ಚ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾಗಾಗಿ ಅರ್ಧ ಕೋಟಿ ರೂ.ವೆಚ್ಚದಲ್ಲಿ ಕಚೇರಿ ನಿರ್ಮಾಣವಾಗುತ್ತಿರುವ ಕುರಿತು ಭಾರೀ ಚರ್ಚೆಗೆ ಕಾರಣವಾಗಿದೆ.
ಐದು ಚೇಂಬರ್‌ಗಳನ್ನು ಈ ನೂತನ ಕಚೇರಿ ಹೊಂದಿದ್ದು, ಇಂಟೀರಿಯರ್ ವರ್ಕ್ ನಡೆಯುತ್ತಿದೆ. ಹಾಗೆನೇ ಯಾರೂ ಪ್ರವೇಶಿಸದ ರೀತಿಯಲ್ಲಿ ಟಾರ್ಪಲ್ ಅಳವಡಿಸಲಾಗಿದೆ. ಇಲ್ಲಿ ಈ ಮೊದಲು ಪಾಲಿಕೆಯ ಆರೋಗ್ಯ ಇಲಾಖೆಯ ವಿಭಾಗ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಐವನ್ ಡಿಸೋಜಾ ಕಚೇರಿ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆ ವಿಭಾಗವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದ್ದು, ಸ್ಥಳಾಂತರ ಮಾಡಲಾದ ಜಾಗದಲ್ಲಿ ಇಕ್ಕಟ್ಟು ಇರುವುದರಿಂದ ಅಧಿಕಾರಿ ಸಿಬ್ಬಂದಿ ಕಷ್ಟ ಪಡುವಂತಾಗಿದೆ ಎಂದು ವರದಿಯಾಗಿದೆ.
ಕಡತಗಳನ್ನು ಇಡುವುದಕ್ಕೇ ಸಾಕಷ್ಟು ಜಾಗ ಇಲ್ಲದ ಸ್ಥಿತಿಯಲ್ಲಿ ಇರುವಾಗ ಎಂಎಲ್‌ಸಿಗೆ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಇಷ್ಟೊಂದು ದೊಡ್ಡ ಕಚೇರಿ ಏಕೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ನಗರಾಭಿವೃದ್ಧೀ ಸಚಿವರಿಗೂ ಇಷ್ಟು ದೊಡ್ಡ ಕಚೇರಿ ಇಲ್ಲ, ಐವನ್ ಡಿಸೋಜಾಗೆ ಯಾಕೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಪ್ರಶ್ನೆ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೂಡಾ ಇಲ್ಲಿಂದಲೇ ಕಾರ್ಯ ನಿರ್ವಹಿಸುತ್ತದೆ, ಇದು ಎಂಎಲ್‌ಸಿ ಐವನ್ ಡಿಸೋಜಾ ಕಚೇರಿ ಮಾತ್ರ ಅಲ್ಲ ಎಂದು ಕಾಂಗ್ರೆಸ್ ನಾಯಕರ ವಾದ.
