Pressure Cooker: ಇಂದು ಸಾಮಾನ್ಯ ಪಾತ್ರೆಗಳಲ್ಲಿ ಅನ್ನ ಮಾಡುವುದು, ತರಕಾರಿ, ಬೇಳೆಗಳನ್ನು ಬೇಯಿಸುವುದು ತೀರಾ ಕಡಿಮೆಯಾಗಿದೆ. ಯಾಕೆಂದರೆ ಅವುಗಳ ಜಾಗವನ್ನು ಕುಕ್ಕರ್ ವಶಪಡಿಸಿಕೊಂಡಿದೆ. ಹೌದು, ಅನ್ನದಿಂದ ಹಿಡಿದು ಬೇಳೆ, ಪಾಯಸ, ಮಟನ್ ವರೆಗೆ ಹಲವು ಆಹಾರ ಪದಾರ್ಥಗಳನ್ನು ಪ್ರೆಷರ್ ಕುಕ್ಕರ್‌ನಲ್ಲಿಯೇ ಬೇಯಿಸುತ್ತಾರೆ. ಪ್ರೆಷರ್ ಕುಕ್ಕರ್‌ನಲ್ಲಿ(Pressure Cooker) ಅಡುಗೆಗಳು ಬೇಗನೆ ಆಗುತ್ತವೆ. ಇದರಿಂದ ಅನಿಲ ಉಳಿತಾಯವಾಗುತ್ತದೆ. ಆದರೆ ಪ್ರೆಷರ್ ಕುಕ್ಕರ್ ಅನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಏಕೆಂದರೆ ಕೆಲವೊಮ್ಮೆ ಇದು ಸ್ಫೋಟಗೊಳ್ಳುತ್ತದೆ. ಅಂತೆಯೇ ಈ ಪ್ರೆಷರ್ ಕುಕ್ಕರ್‌ನಲ್ಲಿ ಏನೇ ಬೇಯಿಸಿದರೂ ನೀರು ಮಾತ್ರ ಸೋರಿಕೆಯಾಗುತ್ತದೆ. ಇದು ಹಲವು ಮಹಿಳೆಯರ ತಲೆನೋವಿಗೆ ಕಾರಣವಾಗಿದೆ. ಹಾಗಿದ್ರೆ ನೀರು ಸೋರದಂತೆ ತಡೆಯಲು ಏನು ಮಾಡಬೇಕು? ಇಲ್ಲಿದೆ ನೋಡಿ ಸುಲಭ ಉಪಾಯ.
ರಬ್ಬರ್ ಪರಿಶೀಲಿಸಿ:
ಕುಕ್ಕರ್ ಮುಚ್ಚಳದ ಮೇಲಿರುವ ರಬ್ಬರ್ ಸುಲಭವಾಗಿ ಅಡುಗೆ ಮಾಡಲು ಬಹಳ ಮುಖ್ಯ. ಆದರೆ ಇದನ್ನು ನೀವು ಯಾವಾಗಲೂ ಬಳಸುತ್ತಿದ್ದರೆ ಅದು ಸಡಿಲವಾಗುತ್ತದೆ. ಇದು ನೀರಿನ ಸೋರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕುಕ್ಕರ್‌ನಲ್ಲಿ ಅಡುಗೆ ಮುಗಿದ ನಂತರ ಈ ರಬ್ಬರ್ ಮುಚ್ಚಳವನ್ನು ತಣ್ಣೀರಿನಲ್ಲಿ ಮುಳುಗಿಸಿ. ಇದು ಅದರ ಬಾಳಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ರಬ್ಬರ್‌ಗೆ ಎಣ್ಣ ಸವರಿ ತಣ್ಣಗಿರುವ ನೀರಿನಲ್ಲಿ ಅದ್ದಿ ಇಡಬೇಕು. ಸುಮಾರು 1 ಗಂಟೆಯ ಬಳಿಕ ತೆಗೆದು ಮತ್ತೆ ಎಣ್ಣೆ ಸವರಿದರೆ ರಬ್ಬರ್ ಬಿಗಿಯಾಗುತ್ತದೆ. ಇಲ್ಲವೆ ಈ ರಬ್ಬರ್ ಅನ್ನು ಫ್ರಿಡ್ಜ್‌ನಲ್ಲಿ ಡೀಪ್ ಫ್ರೀಜ್‌ನಲ್ಲಿ ಇಡಬೇಕು. ನಂತರ ಕುಕ್ಕರ್‌ನಿಂದ ನೀರು ಸೋರಿಕೆಯಾಗುವುದಿಲ್ಲ.
ವಿಶಲ್ ತೆಗೆದು ಕ್ಲೀನ್ ಮಾಡಿ
ಕುಕ್ಕರ್ ವಿಷಲ್‌ನಲ್ಲಿ ಆಹಾರ ಕಣಗಳು ಇರಬಾರದು. ಏಕೆಂದರೆ ಇವುಗಳಲ್ಲಿ ಯಾವುದಾದರೂ ಇದ್ದರೆ ಆವಿಯಾಗುವಿಕೆಗೆ ಅಡ್ಡಿಯಾಗುತ್ತದೆ. ಇದು ಸೋರಿಕೆಗೆ ಕಾರಣವಾಗುತ್ತದೆ. ಹೀಗಾಗಿ ಕುಕ್ಕರ್ ಸೀಟಿ ಬಳಿಯಿಂದ ನೀರು ಸುರಿಯುತ್ತಿದ್ದರೆ ಅದನ್ನು ನಿಲ್ಲಿಸಲು ಸೀಟಿಯನ್ನು ಬಿಚ್ಚಿ ಚೆನ್ನಾಗಿ ತೊಳೆಯಬೇಕು. ಹಾಗೆ ಸೇಫ್ಟಿ ಬಳಿ ಹಿಡಿದಿರುವ ಕಪ್ಪು ಕೊಳೆಯನ್ನು ತೆಗೆಯಬೇಕು. ಒಂದು ಸಣ್ಣ ಕಡ್ಡಿಯನ್ನು ತೆಗೆದುಕೊಂಡು ಸ್ವಚ್ಚ ಮಾಡಿಕೊಳ್ಳಬೇಕು.
ಮರಳು ಕಾಗದ / ಸ್ಯಾಂಡ್ ಪೇಪರ್ ಬಳಸಿ
ಕುಕ್ಕರ್‌ನ ಒಂದು ಬದಿಯಲ್ಲಿ ನೀರು ಹನಿಹಾಕುವುದು ಇಲ್ಲವೆ ಸುರಿಯುವುದು ಆಗುತ್ತಿದ್ದರೆ ಈ ಸ್ಯಾಂಡ್ ಪೇಪರ್ ಬಳಸಿ ಸರಿ ಮಾಡಬಹುದು. ಕುಕ್ಕರ್‌ನ ಮುಚ್ಚಳದ ಕಂಠದ ಬಳಿ ಗೆರೆಗಳು ಮೂಡುವ ಕಾರಣ ನೀರು ಸೋರಲು ಆರಂಭಿಸುತ್ತದೆ. ಹೀಗಾಗಿ ಈ ಗೆರೆಗಳನ್ನು ಮೊದಲು ತೆಗೆಯಬೇಕು. ಹೀಗಾಗಿ ಸ್ಯಾಂಡ್ ಪೇಪರ್ ಅನ್ನು ಗೆರೆಗಳಿರುವ ಜಾಗದಲ್ಲಿ ಉಜ್ಜಬೇಕು. ಈ ಗೆರೆಗಳು ಮಾಯವಾದರೆ ಇನ್ನೆಂದು ನೀರು ಸುರಿಯುವುದಿಲ್ಲ.
ಹೆಚ್ಚು ತುಂಬಬೇಡಿ
ಕುಕ್ಕರ್ ತುಂಬಾ ಅಡುಗೆ ಮಾಡುವುದು ಒಳ್ಳೆಯದಲ್ಲ. ಇದು ಕೂಡ ಕುಕ್ಕರ್‌ನಿಂದ ನೀರು ಸೋರಿಕೆಯಾಗುವಂತೆ ಮಾಡುತ್ತದೆ. ಆದ್ದರಿಂದ ಪ್ರೆಷರ್ ಕುಕ್ಕರ್ ಅನ್ನು ಗರಿಷ್ಠ ಸೂಚಿಸಲಾದ ರೇಖೆಯವರೆಗೆ ಮಾತ್ರ ತುಂಬಿಸಬೇಕು. ಅಲ್ಲದೆ ಅಡುಗೆ ಮಾಡುವಾಗ ಪದಾರ್ಥಗಳನ್ನು ಎಷ್ಟು ಹಾಕಬೇಕು ಎಂದು ನೋಡಿ.
