Income Tax: ದೇಶದ ಸಂಪತ್ತಿನಲ್ಲಿ ಹೆಚ್ಚು ಪಾಲು ಪಡೆದು ಹೆಚ್ಚು ಸಂಪಾದನೆ ಮಾಡುವ ವ್ಯಕ್ತಿ ಹೆಚ್ಚು ತೆರಿಗೆ( tax) ಕಟ್ಟಿದರೆ, ಕಡಿಮೆ ಪಾಲು ಹೊಂದಿದ ವ್ಯಕ್ತಿ ಕಡಿಮೆ ತೆರಿಗೆ ಕಟ್ಟುತ್ತಾನೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ದೇಶದ(Country) ಸಂಪತ್ತಿನಲ್ಲಿ ಅವರವರು ಪಡೆದ ಪಾಲಿಗನುಗುಣವಾಗಿ ಎಲ್ಲರೂ ತೆರಿಗೆ ಕಟ್ಟುತ್ತಿದ್ದಾರೆ.
ಆದಾಯ ತೆರಿಗೆ ಪಾವತಿಸುವವರಿಗೆ ವರ್ಷಕ್ಕೆ ಇಷ್ಟೇ ಮೊತ್ತ ಕಟ್ಟುತ್ತೇವೆ ಎಂಬ ಲೆಕ್ಕ ಸಿಗುತ್ತದೆ. ಆದರೆ, ಖರೀದಿ-ಸೇವೆ ಆಧಾರದ ಮೇಲೆ ವಸೂಲು ಮಾಡುವ ತೆರಿಗೆಯ ಮೊತ್ತ ಎಷ್ಟು ಎಂಬುದು ಗೊತ್ತೇ ಆಗುವುದಿಲ್ಲ. ಅದರ ಅಂದಾಜು ಇಲ್ಲಿದೆ.
ಗಾರೆ ಕಾರ್ಮಿಕರೊಬ್ಬರ ಉದಾಹರಣೆಯನ್ನೇ ತೆಗೆದುಕೊಂಡರೆ, ಒಬ್ಬರ ದಿನಗೂಲಿ ಸುಮಾರು ₹ 500ರಿಂದ ₹700ರವರೆಗೆ ಇರುತ್ತದೆ. ಆತ ಪ್ರತಿದಿನ ದ್ವಿಚಕ್ರ ವಾಹನದಲ್ಲಿ 15 ರಿಂದ 25 ಕಿ.ಮಿ ದೂರದ ಪ್ರದೇಶಕ್ಕೆ ಕೆಲಸಕ್ಕಾಗಿ ಹೋಗಬೇಕಾಗುತ್ತದೆ. ಅದಕ್ಕೆ ದಿನವೂ 1 ಲೀಟರ್ (₹100 ಇದ್ದರೆ) ಪೆಟ್ರೋಲ್ ಬಳಸಿದರೆ, ಆತ ತೆರಬೇಕಾದ ತೆರಿಗೆ ಮೊತ್ತ ₹65 ರಿಂದ ₹67. ಆತ ಮದ್ಯಪಾನ ಮಾಡುವವನಾಗಿದ್ದರೆ, ಪ್ರತಿ ದಿನ ಅದಕ್ಕಾಗಿ ₹200 ಖರ್ಚು ಮಾಡುತ್ತಾರೆ ಎಂದು ಕೊಂಡರೆ ಅದರ ತೆರಿಗೆ ಮೊತ್ತ ಶೇ 50ರಿಂದ ಶೇ 80 ರಷ್ಟಾಗುತ್ತದೆ.
ಇದರ ಜತೆಗೆ ಖಾದ್ಯ ತೈಲ, ದಿನಸಿ, ಪೇಸ್ಟ್, ಸೋಪು ಸೇರಿದಂತೆ ಬಹುತೇಕ ದಿನ ಬಳಕೆ ಶೇ 18ರವರೆಗೆ ತೆರಿಗೆ ಇದೆ. ಅನಾರೋಗ್ಯ- ವಯೋಸಹಜ ಕಾಯಿಲೆಯ ಔಷಧ ಖರ್ಚು ಇದ್ದರೆ ಅದಕ್ಕೆ ಶೇ 12 ರಿಂದ ಶೇ 28 ರಷ್ಟು ತೆರಿಗೆ ಇದೆ. ಈ ರೀತಿಯ ಪರೋಕ್ಷ ತೆರಿಗೆ ಪಾವತಿಸುವ ಮೊತ್ತ ಲೆಕ್ಕ ಹಾಕಿದರೆ ವರ್ಷಕ್ಕೆ ಒಬ್ಬ ಸಾಮಾನ್ಯ ವ್ಯಕ್ತಿ ಬರೋಬ್ಬರಿ ಒಂದು ಲಕ್ಷದವರೆಗೆ ತೆರಿಗೆ ಕಟ್ಟುತ್ತಾರೆ ಎಂದರೆ ನಂಬುತ್ತೀರಾ?
