Home » Sahara Desert: 50 ವರ್ಷಗಳಲ್ಲೇ ಕಂಡು ಕೇಳರಿಯದ ಮಳೆ – ‘ಸಹರಾ’ ಮರುಭೂಮಿಯಲ್ಲಿ ಉಕ್ಕಿದ ಪ್ರವಾಹ !!

Sahara Desert: 50 ವರ್ಷಗಳಲ್ಲೇ ಕಂಡು ಕೇಳರಿಯದ ಮಳೆ – ‘ಸಹರಾ’ ಮರುಭೂಮಿಯಲ್ಲಿ ಉಕ್ಕಿದ ಪ್ರವಾಹ !!

0 comments

Sahara Desert: ವಿಶ್ವದ ಅತಿದೊಡ್ಡ ಮರುಭೂಮಿ ಎಂದು ಕರೆಯುವ ಸಹರಾ ಮರುಭೂಮಿ ಭಾರಿ ಪ್ರಮಾಣದಲ್ಲಿ ಪ್ರವಾಹವಾಗಿದೆ !! ಇದು ನಿಮಗೆ ಅಚ್ಚರಿಯಾದರೂ ಸತ್ಯ, ಸತ್ಯ !! ಹೌದು, ವಿಶ್ವದ ಅತಿದೊಡ್ಡ ಮರುಭೂಮಿ ಎಂದೇ ಕರೆಯಲ್ಪಡುವ ಉತ್ತರ ಆಫ್ರಿಕಾದಲ್ಲಿ ವಿಸ್ತಾರವಾಗಿ ಹರಡಿರುವ ಸಹರಾ ಮರಭೂಮಿಯಲ್ಲಿ( Sahara Desert) ಈಗ ದಿಢೀರ್‌ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದ ನೀರು ಹರಿಯುತ್ತಿರುವ ಸೆಟಲೈಟ್‌ ಚಿತ್ರಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಅಂದಹಾಗೆ ಇದು ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಸಹರಾ ಮರುಭೂಮಿ ಪ್ರವಾಹಕ್ಕೆ ಸಾಕ್ಷಿಯಾಗಿರುವುದಾಗಿ ವರದಿ ತಿಳಿಸಿದೆ. ಆಗ್ನೇಯ ಮೊರಾಕೊದಲ್ಲಿ ಎರಡು ದಿನಗಳ ಭಾರೀ ಮಳೆಯ ನಂತರ ಸಹಾರಾ ಮರುಭೂಮಿಯ ಹಲವು ಭಾಗಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಈ ಮಳೆ ಹಾಗೂ ಪ್ರವಾಹವನ್ನು ಕಂಡು ಹವಾಮಾನ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮೊರೊಕ್ಕೊದ ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜಧಾನಿ ರಬಾಟ್‌ ನಿಂದ 450 ಕಿಲೋ ಮೀಟರ್‌ ದೂರದಲ್ಲಿರುವ ಟಗೌನೈಟ್‌ ಗ್ರಾಮದಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿಲಿ ಮೀಟರ್‌ ದಾಖಲೆಯ ಮಳೆ ಸುರಿದಿರುವುದಾಗಿ ತಿಳಿಸಿದ್ದಾರೆ. ಅರ್ಧ ಶತಮಾನದಿಂದ ಝಾಗೋರಾ ಮತ್ತು ಟಾಟಾ ನಡುವೆ ಒಣಗಿದ್ದ ಇರಿಕಿ ಕೆರೆ ಪ್ರವಾಹದಿಂದ ಮತ್ತೆ ತುಂಬಿದೆ ಎಂದು ನಾಸಾದ ಉಪಗ್ರಹ ಚಿತ್ರಗಳು ತೋರಿಸಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಮಳೆಯಾಗುವುದು 30 ರಿಂದ 50 ವರ್ಷಗಳ ನಂತರ ಎಂದು ಮೊರಾಕೊದ ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಭಾರೀ ಮಳೆಯಿಂದ ಮೊರಕ್ಕೋದಲ್ಲಿ ಕಳೆದ ತಿಂಗಳು ನೆರೆ (Flood) ಸೃಷ್ಟಿಯಾಗಿ 18 ಮಂದಿ ಮೃತಪಟ್ಟಿದ್ದರು. ಆಗ್ನೇಯ ಭಾಗದಲ್ಲಿ ನಿರ್ಮಾಣವಾಗಿರುವ ಜಲಾಶಯಗಳು ಸೆಪ್ಟೆಂಬರ್‌ನಲ್ಲೇ ಭರ್ತಿಯಾಗಿದೆ ಎಂದು ವರದಿಯಾಗಿದೆ. ಉತ್ತರ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಾದ್ಯಂತ 9 ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಸಹಾರಾ ಮರುಭೂಮಿಯು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ವಿಪರೀತ ಹವಾಮಾನ ಸಮಸ್ಯೆ ಎದುರಿಸುತ್ತಿದೆ. ಭವಿಷ್ಯದಲ್ಲಿ ಈ ಪ್ರದೇಶಗಳಲ್ಲಿ ಬಿರುಗಾಳಿ ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

You may also like

Leave a Comment