Rameshwaram Cafe Blast: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಕುರಿತಂತೆ ಪಾಕಿಸ್ತಾನದ ನಂಟಿದೆ ಎನ್ನುವ ಆತಂಕಕಾರಿ ವಿಚಾರ ಎನ್‌ಐಎ ತನಿಖೆಯಲ್ಲಿ ಹೊರಬಿದ್ದಿದೆ. ರಾಮೇಶ್ವರಂ ಕೆಫೆ ಸ್ಫೋಟ ಕುರಿತಂತೆ ಪಾಕಿಸ್ತಾನದ ನಂಟು ಇರುವುದು, ಪಾಕ್ ಮೂಲಕ ಶಂಕಿತ ಉಗ್ರ ಎ6 ಫೈಸಲ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾಣೆ ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ಬಹಿರಂಗವಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ತಾಹಾ ಹಾಗೂ ಶಾಜಿದ್ ನಾಪತ್ತೆಯಾಗಿದ್ದು, ಕೆಲ ಕಾಲದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್ ಬಂದಿದ್ದರು. ಆಗ ಮುಜಾಮಿಇಲ್ ಷರೀಪ್ ಜೊತೆ ಪರಿಚಯವಾಗಿತ್ತು. ಮುಜಾಮಿಲ್ ಮೆಜೆಸ್ಟಿಕ್ ಬಳಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನ ಮನಪರಿವರ್ತನೆ ಮಾಡಿದ್ದ ತಾಹಾ ಹಾಗೂ ಶಾಜಿದ್ ಐಸಿಸ್‌ಗೆ ಸೇರ್ಪಡೆ ಮಾಡಿದ್ದರು.
2023 ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಇವರು, 2024 ರ ಜ.22 ರಂದು ಬಿಜೆಪಿ ಕಚೇರಿ ಬಳಿ ಬಂದಾಗ ಭದ್ರತೆ ಹೆಚ್ಚಿದ ಕಾರಣಕ್ಕೆ ಬಾಂಬ್ ಇಡಲು ಸಾಧ್ಯವಾಗದೇ ಹೋಗಿತ್ತು. ಆದರೆ ಕಚೇರಿ ಹಿಂಭಾಗ ಬಾಂಬ್ ಇಟ್ಟು ಟೈಮರ್ ಸೆಟ್ ಮಾಡಿ ಹೋಗಿದ್ದರು. ಆದರೆ ಅದು ಸ್ಫೋಟಗೊಂಡಿರಲಿಲ್ಲ. ಹಾಗಾಗಿ ಪ್ಲ್ಯಾನ್ ವಿಫಲಗೊಂಡಿದ್ದಕ್ಕೆ ಒಂದೇ ವಾರದಲ್ಲಿ ಮತ್ತೊಂದು ಬಾಂಬ್ ತಯಾರು ಮಾಡಿ ಫೆ. 29 ರಂದು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಶಾಜಿದ್, ಮಾ.1 ರಂದು ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟ ಗೊಳಿಸಿದ್ದ.
ಇದೀಗ ಈ ಪ್ರಕರಣ ಕುರಿತಂತೆ ಪಾಕಿಸ್ತಾನದ ನಂಟು ಇದರಲ್ಲಿ ಇದೆ ಎಂಬ ವರದಿ ಬಹಿರಂಗಗೊಂಡಿದೆ. ಎ6 ಆರೋಪಿ ಫೈಜಲ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಕುರಿತು ವರದಿಯಾಗಿದೆ.
