Marriage: ಮನುಷ್ಯ ಸಂಘ ಜೀವಿ. ಅಂತೆಯೇ ಹೆಣ್ಣಾಗಲಿ ಗಂಡು ಆಗಲಿ ತನಗಾಗಿ ಒಂದು ಜೀವನ ಸಂಗಾತಿಯನ್ನು ಆರಿಸಿಕೊಳ್ಳುತ್ತಾರೆ. ಅದರಲ್ಲೂ 99% ಜನರಿಗೆ ಮದುವೆ ಆದರೆ ಜೀವನ ಪರಿಪೂರ್ಣ ಎಂಬ ಭಾವನೆ ಇದೆ. ಆದ್ರೆ ಹರಿಯಾಣದ ಫರೀದಾಬಾದಿನ ಒಂದಷ್ಟು ಯುವತಿಯರು ‘ನಾವು ಯಾವುದೇ ಕಾರಣಕ್ಕೂ ಮದುವೆ (Marriage) ಆಗುವುದಿಲ್ಲ’ ಎಂದು ಶಪಥ ಮಾಡಿದ್ದಾರೆ. ಅಲ್ಲದೇ ನಾವು ಮದುವೆ ಆಗದೆಯೂ ಸಾರ್ಥಕ ಜೀವನ ನಡೆಸಬಹುದು ಎಂಬ ನಿಲುವಿಗೆ ಬಂದಿದ್ದಾರೆ.

ಹೌದು, ಫರೀದಾಬಾದಿನ 12 ಹುಡುಗಿಯರು ‘ಮದುವೆ ಆಗದೆಯೂ ವೈಯಕ್ತಿಕ ಬೆಳವಣಿಗೆ ಕಾಣಲು ಸಾಧ್ಯ, ಅದಕ್ಕೂ ಮಿಗಿಲಾಗಿ ಸಮಾಜ ಸೇವೆಯ ಕಡೆ ಗಮನಹರಿಸಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಬಹುದು’ ಎನ್ನುವ ಕಾರಣಕ್ಕೆ ವಿವಾಹವಾಗದಿರಲು ಪ್ರತಿಜ್ಞೆ ಮಾಡಿದ್ದಾರಂತೆ.
ಸಾಂಪ್ರದಾಯಿಕವಾಗಿ ವೈವಾಹಿಕ ನಿರೀಕ್ಷೆಗಳಿಗಿಂತ ನಾವು ನಮ್ಮ ಕಾಲ ಮೇಲೆ ನಿಂತು ಸಮಾಜಕ್ಕೆ ಏನನ್ನದಾದರೂ ಕೊಡುಗೆ ನೀಡುವುದು ಬಹಳ ಮುಖ್ಯ. ಹಾಗಾಗಿ ನಾವೆಲ್ಲರು ಒಗ್ಗಟ್ಟಿನಿಂದ ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ ಈ ಹುಡುಗಿಯರು. ಈ 12 ಹುಡುಗಿಯರ ಗುಂಪಿನಲ್ಲಿ ಒಬ್ಬರಾದ ಮಿನು ಗೋಯಲ್ ಮಾಧ್ಯಮದವರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
‘ನಾವೆಲ್ಲರೂ ನಮ್ಮ ವೈಯಕ್ತಿಕ ಹಿತಕ್ಕಿಂತ ಮಿಗಿಲಾಗಿ ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳಲು ನಿಶ್ಚಯಿಸಿದ್ದೇವೆ. ನಮ್ಮಗಳ ಪೈಕಿ ಪ್ರತಿಯೊಬ್ಬರಿಗೂ ಅವರದೆಯಾದ ಮಾರ್ಗವಿದೆ. ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದು ಮತ್ತು ಸ್ವಾವಲಂಬಿಯಾಗಿ ಬದುಕುವುದು ನಮ್ಮ ಧ್ಯೇಯ’ ಎಂದು ಮಿನು ಗೋಯಲ್ ಹೇಳುತ್ತಾರೆ.
ಇನ್ನು ‘ವಿವಾಹವಾಗದೆ ಇರುವ’ ಮಿನು ಗೋಯಲ್ ನಿರ್ಧಾರಕ್ಕೆ ಅವರ ಕುಟುಂಬದವರ ಪ್ರಕಾರ ‘ನಮಗೆ ಐದು ಮಕ್ಕಳಿದ್ದಾರೆ. ಬೇರೆಯವರು ಮದುವೆ ಆಗಿದ್ದಾರೆ. ಈಕೆ ಮದುವೆ ಆಗದೆಯೂ ಬೇರೇನನ್ನೋ ಸಾಧಿಸುವುದಾದರೆ ನಾವು ಅದನ್ನು ನೋಡಿ ಸಂತಸ ಪಡುತ್ತೇವೆ. ವಿಶೇಷವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಅದೇ ನಮಗೆ ಖುಷಿ’ ಎನ್ನುತ್ತಾರೆ ಪೋಷಕರು. ಹೀಗೆ ಪ್ರತಿಯೊಬ್ಬರೂ ಅವರದೇ ಕಾರಣಗಳಿಂದ ಮದುವೆ ಆಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
