Maharashtra: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ವಿಸ್ಮಯಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರು ವ್ಯಕ್ತಿಯೋರ್ವ ಸತ್ತ ಎಂದು ಘೋಷಿಸಿದ ವ್ಯಕ್ತಿ ಜೀವಂತವಾಗಿದ್ದಾನೆ. ಇದರ ನಂತರ, 15 ದಿನಗಳ ಕಾಲ ಚಿಕಿತ್ಸೆ ನಂತರ, ವ್ಯಕ್ತಿಯು ಮನೆಗೆ ಮರಳಿದ್ದು, ಈಗ ಈ ಘಟನೆಯ ಬಗ್ಗೆ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ.
ಏನಿದು ಘಟನೆ?
ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಸಬಾ-ಬಾವ್ಡಾ ನಿವಾಸಿ ಪಾಂಡುರಂಗ್ ಉಲ್ಪೆ (65ವರ್ಷ) ಅವರು ಡಿಸೆಂಬರ್ 16 ರಂದು ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಉಲ್ಪೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ಸಂಬಂಧಿಕರು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು.
ಆಸ್ಪತ್ರೆಯಿಂದ ಅವರ ದೇಹವನ್ನು ಮನೆಗೆ ತರುವಾಗ, ಆಂಬ್ಯುಲೆನ್ಸ್ ಡ್ರೈವರ್ ಸ್ಪೀಡ್ ಬ್ರೇಕರ್ ನೋಡದೇ ವೇಗವಾಗಿ ಚಾಲನೆ ಮಾಡಿದ್ದಾನೆ. ಕೂಡಲೇ ಸತ್ತ ವ್ಯಕ್ತಿಯ ಬೆರಳುಗಳಲ್ಲಿ ಚಲನೆ ಕಂಡುಬಂದಿದೆ ಎಂದು ಉಲ್ಪೆ ಅವರ ಪತ್ನಿ ಹೇಳಿದರು. ಕೂಡಲೇ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹದಿನೈದು ದಿನಗಳ ಕಾಲ ಇದ್ದು, ‘ಆಂಜಿಯೋಪ್ಲ್ಯಾಸ್ಟಿ’ಗೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. 15 ದಿನಗಳ ಚಿಕಿತ್ಸೆಯ ನಂತರ ಪಾಂಡುರಂಗ್ ಸೋಮವಾರ ಉಲ್ಪೆ ಆಸ್ಪತ್ರೆಯಿಂದ ಮನೆಗೆ ಮರಳಿದರು.
ನಾನು ಮನೆಗೆ ಬಂದು ಚಹಾ ಕುಡಿದು ಕುಳಿತಿದ್ದೆ. ನನಗೆ ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಯಾಯಿತು. ನಾನು ಬಾತ್ರೂಮ್ಗೆ ಹೋಗಿ ವಾಂತಿ ಮಾಡಿದೆ. ಆ ನಂತರ ಏನಾಯಿತು ಎಂದು ನನಗೆ ನೆನಪಿಲ್ಲ ಎಂದು ವ್ಯಕ್ತಿ ಹೇಳಿದ್ದಾರೆ. ಆದರೆ, ಮೃತಪಟ್ಟಿರುವುದಾಗಿ ಹೇಳಿದ ಆಸ್ಪತ್ರೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
