Veerendra Heggade: : ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ(C T Ravi) ಅಶ್ಲೀಲ ಪದ ಉಪಯೋಗಿಸಿದ್ದಾರೆ ಎಂಬ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹೆಬ್ಬಾಳ್ಕರ್ ಅವರು ಭಾರಿ ರೊಚ್ಚಿಗೆದ್ದಿದ್ದು ನನಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವವಳಲ್ಲ ಎಂದು ಶಪಥ ಮಾಡಿದ್ದಾರೆ. ಅಲ್ಲದೆ ಈ ವಿಚಾರ ಇದೀಗ ಆಣೆ ಪ್ರಮಾಣದ ಮಾತು ಕೇಳಿ ಬಂದಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ(Dharmasthala) ಮಂಜುನಾಥನ ಸನ್ನಿಧಿವರೆಗೂ ಹೋಗಿದೆ.
ಹೌದು. ಲಕ್ಷ್ಮಿ ಅವರ ವಿರುದ್ಧ ನಾನು ಅಶ್ಲೀಲ ಪದ ಪ್ರಯೋಗ ಮಾಡಿಲ್ಲ ಎಂದು ಸಿಟಿ ರವಿ ಅವರು ವಾದಿಸುತ್ತಿದ್ದಾರೆ. ಹೀಗಾಗಿ ಸಿಟ್ಟಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀವು ಆ ಪದವನ್ನು ಉಪಯೋಗಿಸಿಲ್ಲ ಎಂದಾದರೆ ಧರ್ಮಸ್ಥಳಕ್ಕೆ ಬಂದು, ನಾನು ಆ ಪದ ಬಳಸಿಯೇ ಇಲ್ಲ ಅಂತ ಸಿಟಿ ರವಿ ಹೇಳಬೇಕು. ನಾನು ದೇವರನ್ನು ನಂಬಿದ್ದೀನಿ, ನೀವೂ ದೇವರನ್ನು ನಂಬಿದ್ದೀರಿ. ನಿಮ್ಮ ಊರಿಗೆ ಧರ್ಮಸ್ಥಳ ತುಂಬಾ ಹತ್ತಿರ ಇದೆ. ಬನ್ನಿ ನೀವೂ ಪ್ರಮಾಣ ಮಾಡಿ. ನಾನೂ ಪ್ರಮಾಣ ಮಾಡ್ತೀನಿ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ. ಇದೀಗ ಈ ಆಣೆ ಪ್ರಮಾಣದ ವಿಚಾರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ(Veerendra Heggade)ಯವರು ಮಾತನಾಡಿದ್ದಾರೆ.
ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಲು ಸಿ.ಟಿ ರವಿ ಅವರನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಹ್ವಾನಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ, ತಿಳಿದು ತಿಳಿದೂ ಯಾರು ತಪ್ಪು ಮಾಡಬಾರದು. ಮಾತು ತಪ್ಪಿದರೆ ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ. ಮಾತಿಗೆ ತಪ್ಪಿದರೆ ಆತ್ಮಸಾಕ್ಷಿಯೇ ನಮ್ಮನ್ನು ಚುಚ್ಚುತ್ತದೆ, ಇದೇ ಅವರಿಗೆ ಸಿಗುವ ಶಿಕ್ಷೆ. ಅಲ್ಲದೆ ಧರ್ಮಸ್ಥಳ ಮಂಜುನಾಥನ ಕ್ಷೇತ್ರದಲ್ಲಿ ಅಣ್ಣಪ್ಪ ದೈವವಿದೆ. ಯಾರೇ ತಪ್ಪು ನುಡಿದರೂ ಧರ್ಮಸ್ಥಳ ಮಂಜುನಾಥ ಮತ್ತು ಕ್ಷೇತ್ರ ರಕ್ಷಕ ಅಣ್ಣಪ್ಪನಿಂದ ತಪ್ಪಿಗೆ ತಕ್ಕ ಶಿಕ್ಷೆಯಾಗುತ್ತದೆ. ಹೀಗಾಗಿ ಮಾತಿಗೆ ತಪ್ಪಿ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.
