Uttar Pradesh: ಪರೀಕ್ಷೆಯ ವೇಳೆ ಸ್ಯಾನಿಟರಿ ಪ್ಯಾಡ್‌ಗಳನ್ನು ಕೇಳಿದ್ದಕ್ಕಾಗಿ ಬಾಲಕಿಯರ ಶಾಲೆಯ 11 ನೇ ತರಗತಿ ವಿದ್ಯಾರ್ಥಿನಿಯನ್ನು ತರಗತಿಯ ಹೊರಗೆ ಒಂದು ಗಂಟೆ ನಿಲ್ಲಿಸಿದ ಘಟನೆಯೊಂದು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಈ ಘಟನೆ ಶನಿವಾರ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶನಿವಾರದಂದು ವಿದ್ಯಾರ್ಥಿನಿ ಋತುಸ್ರಾವ ಪ್ರಾರಂಭವಾಗಿದ್ದು, ಆಕೆ ಪ್ರಾಂಶುಪಾಲರ ಬಳಿ ಸಹಾಯ ಕೇಳಿದಾಗ ಈ ಘಟನೆ ನಡೆದಿದೆ. ಸಹಾಯ ನೀಡುವ ಬದಲು ಆಕೆಯನ್ನು ಕಡೆಗಣಿಸಲಾಗಿದೆ ಮತ್ತು ನಿಂದಿಸಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ, ತನ್ನ ಮಗಳು ಪರೀಕ್ಷೆಗೆ ಹಾಜರಾಗಲು ಶಾಲೆಗೆ ಹೋಗಿದ್ದಳು, ಆದರೆ ಆಕೆಗೆ ಋತುಸ್ರಾವ ಶುರುವಾಗಿದೆ. ಪ್ರಾಂಶುಪಾಲರನ್ನು ಸ್ಯಾನಿಟರಿ ಪ್ಯಾಡ್‌ಗಾಗಿ ಕೇಳಿದಾಗ ತರಗತಿಯಿಂದ ಹೊರಹೋಗುವಂತೆ ಹೇಳಿ ಸುಮಾರು ಒಂದು ಗಂಟೆ ಕಾಲ ಹೊರಗೆ ನಿಲ್ಲುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಂದೆ ಜಿಲ್ಲಾಧಿಕಾರಿ, ಜಿಲ್ಲಾ ಶಾಲೆಗಳ ನಿರೀಕ್ಷಕರು (ಡಿಐಒಎಸ್), ರಾಜ್ಯ ಮಹಿಳಾ ಆಯೋಗ ಮತ್ತು ಮಹಿಳಾ ಕಲ್ಯಾಣ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿರುವುದಾಗಿ ಎಂದು ಜಿಲ್ಲಾ ಶಾಲಾ ನಿರೀಕ್ಷಕ ದೇವಕಿ ನಂದನ್ ಹೇಳಿದ್ದಾರೆ.
