Kerala: ಕಳೆದ ವಾರ ಕೇರಳದ ಮಲಪ್ಪುರಂನಲ್ಲಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ 25 ವರ್ಷದ ಮಹಿಳೆಯ ಪತಿಯನ್ನು ಮಹಿಳೆಯ ಕುಟುಂಬವು ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪತಿಯ ಬಂಧನ ಮಾಡಿದ್ದಾರೆ. ಈತನ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪತಿ ಅಥವಾ ಅವರ ಸಂಬಂಧಿಕರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ವಿಷ್ಣುಜಾ, ಮೇ 2023 ರಲ್ಲಿ ಪ್ರಬಿನ್ ಎಂಬಾತನನ್ನು ವಿವಾಹವಾಗಿದ್ದಳು. ಇದೊಂದು ಅರೇಂಜ್ಡ್ ಮದುವೆಯಾಗಿತ್ತು. ಮೇಲ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪ್ರಬಿನ್ ತನ್ನ ಪತ್ನಿ ವಿಷ್ಣುಜಾಳನ್ನು ನಿರಂತರವಾಗಿ ಅವಮಾನಿಸುತ್ತಿದ್ದ. ಆಕೆ ಸುಂದರವಾಗಿಲ್ಲ, ಕೆಲಸ ಇಲ್ಲ ಈಕೆಗೆ ಎಂದು ಹೇಳಿ ತೀರಾ ಮಾನಸಿಕವಾಗಿ ಅವಮಾನಿಸುತ್ತಿದ್ದ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೆ ಈತ ಆಕೆಯನ್ನು ಥಳಿಸುತ್ತಿದ್ದ ಎಂದು ಕೂಡಾ ಮನೆಮಂದಿ ಆರೋಪಿಸಿದ್ದಾರೆ.

ವಿಷ್ಣುಜಾ ಅವರ ತಂದೆ ವಾಸುದೇವನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, “ಆಕೆ ತುಂಬಾ ತೆಳ್ಳಗಿದ್ದಾಳೆ ಎಂದು ಆಕೆಗೆ ಹೇಳುತ್ತಿದ್ದ. ಆಕೆ ನೋಡಲು ಚೆನ್ನಾಗಿಲ್ಲ ಎಂದು ಬೈಕ್‌ನಲ್ಲಿ ಆಕೆಯನ್ನು ತಿರುಗಾಡಲು ಕರೆದುಕೊಂಡು ಹೋಗುತ್ತಿರಲಿಲ್ಲ. ಮದುವೆಯ ನಂತರ ನೀನು ಕೆಲಸಕ್ಕೆ ಹೋಗು ಎಂದು ಆತನೇ ಹೇಳಿದ್ದು. ಆಕೆ ಹಲವು ಪರೀಕ್ಷೆಗಳನ್ನು ಬರೆದಿದ್ದಳು. ಆದರೆ ಆಕೆಗೆ ಕೆಲಸ ಸಿಕ್ಕಿರಲಿಲ್ಲ. ಅವಳು ನಿರಂತರ ಪ್ರಯತ್ನ ಮಾಡುತ್ತಿದ್ದಳು. ಆದರೆ ಆಕೆಗೆ ಕೆಲಸ ದೊರಕಿರಲಿಲ್ಲ” ಎಂದು ಹೇಳಿದರು.
“ನಮಗೆ ಆಕೆ ಗಂಡನ ಕಿರುಕುಳ ಅನುಭವಿಸುತ್ತಿದ್ದಾಳೆ ಎಂದು ತಿಳಿದಾಗ ನಾವು ಆಕೆಗೆ ಸಪೋರ್ಟ್ ಮಾಡಿದೆವು. ಆದರೆ ಆಕೆ ನಮ್ಮನ್ನು ಈ ಕುರಿತು ಮಾತನಾಡಬೇಡಿ ಎಂದು ಹೇಳಿದಳು. ತನ್ನ ವೈವಾಹಿಕ ಸಮಸ್ಯೆಗಳಲ್ಲಿ ಮಧ್ಯಪ್ರವೇಶಿಸಲು ನಮಗೆ ಎಂದಿಗೂ ಅವಕಾಶ ನೀಡಲಿಲ್ಲ. ನಾನು ಆತನನ್ನು ಬದಲಾಯಿಸುವುದಾಗಿ ಹೇಳಿದ್ದಳು. ಆತ ನನ್ನ ಮಗುವಿಗೆ ಹೊಡೆದಿದ್ದಾನೆ ಎಂದು ಈಗ ನನಗೆ ತಿಳಿದಿದೆ. ಆತ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ಎಂದು ನಾವು ಕೇಳಲ್ಪಟ್ಟಿದ್ದೇವೆ” ಎಂದು ವಿಷ್ಣುಜಾ ತಂದೆ ವಾಸುದೇವನ್ ಹೇಳಿದರು.
ವಿಷ್ಣುಜಾಳನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಆರೋಪಿಸಿದರು. “ಅವನು (ಪ್ರಭಿನ್) ಅವಳನ್ನು ಕೊಂದು ನೇಣು ಹಾಕಿದ್ದಾನೆ ಎಂದು ನನಗೆ ನಂಬಿಕೆ ಇದೆ. ಹಾಗೂ ಪ್ರಬಿನ್ ಅವರ ಕುಟುಂಬವು ತಮ್ಮ ಮಗಳಿಗೆ ಕಿರುಕುಳ ನೀಡುವುದನ್ನು ಬೆಂಬಲಿಸಿದೆ ಎಂದು ಮೃತ ಮಹಿಳೆಯ ಕುಟುಂಬ ಆರೋಪಿಸಿದೆ.
“ಅವಳ ವಾಟ್ಸಾಪ್ ಅವನ ಫೋನ್‌ಗೆ ಸಂಪರ್ಕಗೊಂಡಿದೆ”
ಮನೋರಮಾ ಆನ್‌ಲೈನ್‌ನಲ್ಲಿನ ವರದಿಯ ಪ್ರಕಾರ, ಪ್ರಬಿನ್ ವಿಷ್ಣುಜಾಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಆಕೆಯ ಸ್ನೇಹಿತರೊಬ್ಬರು ಹೇಳಿದ್ದಾರೆ. “ಆಕೆಗೆ ಇನ್ನು ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಅರಿವಾದಾಗ, ಅವಳು ನನ್ನೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲು ಪ್ರಾರಂಭಿಸಿದಳು. ನಾನು ಅವಳನ್ನು ಮನೆಗೆ ಹಿಂದಿರುಗಲು ಹೇಳಿದೆ” ಎಂದು ಸ್ನೇಹಿತ ಹೇಳಿದ್ದಾನೆ. ವಿಷ್ಣುಜಾಳ ಸ್ನೇಹಿತೆ ಪ್ರಭಿನ್ ಆಕೆಯ ಚಾಟ್‌ಗಳನ್ನು ಟ್ರ್ಯಾಕ್ ಮಾಡುತ್ತಿದ್ದ ಎಂದು ಆರೋಪ ಮಾಡಿದ್ದಾಳೆ. ಅವಳು ತನ್ನ ಕಷ್ಟವನ್ನು ತನ್ನ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಹಂಚಿಕೊಂಡಿದ್ದಾಳೆ. “ಅವಳ ವಾಟ್ಸಾಪ್ ಸಂಖ್ಯೆಯನ್ನು ಅವನ ಫೋನ್‌ಗೆ ಲಿಂಕ್ ಮಾಡಲಾಗಿತ್ತು. ಅವಳು ಎಂದಿಗೂ ವಾಟ್ಸಾಪ್‌ನಲ್ಲಿ ನಮ್ಮೊಂದಿಗೆ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಆತನಿಗೆ ತಿಳಿಯದಂತೆ ನಾವು ಟೆಲಿಗ್ರಾಮ್‌ನಲ್ಲಿ ಮಾತನಾಡುತ್ತಿದ್ದೆವು” ಎಂದು ಸ್ನೇಹಿತರು ಹೇಳಿದ್ದಾರೆ.
