Crime News: ಉಚಿತ ಕರೆನ್ಸಿ ಹಾಕಲಿಲ್ಲ ಎಂಬ ಕಾರಣಕ್ಕೆ ಮೊಬೈಲ್ ಶಾಪ್ ಮಾಲೀಕನ ಮೇಲೆ ಭೀಕರ ದಾಳಿ ಮಾಡಿ ಹತ್ಯೆ ಮಾಡಿದ್ದ ಅಪರಾಧಿಗೆ ಜೀವಾವಧಿ ಜೈಲು ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ಸಿಸಿಎಚ್ 68ನೇ ನ್ಯಾಯಾಲಯ ಆದೇಶಿಸಿದೆ. ಮಡಿವಾಳದ ಅಮಾನುಲ್ಲಾ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ವೆಂಕಟೇಶ್ವರ ಲೇಔಟ್‌ನಲ್ಲಿ ವಿಶೇಷಚೇತನರಾದ ಮೊಹಮದ್ ನಾಸಿರುದ್ದೀನ್ ಮೊಬೈಲ್ ಶಾಪ್‌ನ್ನು ಹೊಂದಿದ್ದು, ಅಮಾನುಲ್ಲಾ ಹಲವು ಬಾರಿ ತನ್ನ ಮೊಬೈಲ್ ನಂಬರ್‌ಗೆ ಉಚಿತವಾಗಿ ಕರೆನ್ಸಿ ಹಾಕಿಸಿಕೊಂಡಿದ್ದ. ಪದೇ ಪದೇ ಉಚಿತ ಕರೆನ್ಸಿ ಹಾಕಲು ಬೇಡಿಕೆ ಇಟ್ಟಿದ್ದಕ್ಕೆ ನಾಸಿರುದ್ದೀನ್ ನಿರಾಕರಣೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಅಮಾನುಲ್ಲಾ 2016ರ ಮಾರ್ಚ್ 5 ರಂದು ರಾತ್ರಿ 10 ಗಂಟೆ ಸುಮಾರಿಗೆ ಒಬ್ಬಂಟಿಯಾಗಿದ್ದ ನಾಸಿರುದ್ದೀನ್ ಮೇಲೆ ಚಾಕುವಿನಿಂದ ತಲೆ, ಎದೆಭಾಗ ಸೇರಿ ದೇಹದ ಹಲವು ಭಾಗಗಳಿಗೆ 24 ಬಾರಿ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡಿದ ಮಡಿವಾಳ ಪೊಲೀಸರು ಆರೋಪಿ ಅಮಾನುಲ್ಲಾನನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಎ.ರಶ್ನಿ ಅವರು ಅಪರಾಧಿ ಅಮಾನುಲ್ಲಾಗೆ ಜೀವಾವಧಿ ಜೈಲು ಹಾಗೂ ದಂಡವನ್ನು ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಆರ್.ವಿ.ಭಟ್ ವಾದ ಮಾಡಿದ್ದರು.
ಆರೋಪಿ ಅಮಾನುಲ್ಲಾ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹುಚ್ಚನಂತೆ ಬಿಂಬಿಸಿಕೊಳ್ಳಲು ಪ್ರಯತ್ನ ಮಾಆಡಿದ್ದ. ತಾನು ಮಾನಸಿಕ ಅಸ್ವಸ್ಥ ಎಂದು ನ್ಯಾಯಾಲಯಕ್ಕೆ ತಿಳಿಸಿ ವಿಚಾರಣಾ ಪ್ರಕ್ರಿಯೆಗಳಿಗೂ ಅಡ್ಡಿಪಡಿಸುತ್ತಿದ್ದ. ಹೀಗಾಗಿ ಆತನ ಮಾನಿಸಕ ಸ್ಥಿತಿಯ ಕುರಿತ ವೈದ್ಯಕೀಯ ವರದಿ ಸೇರಿ ಹಲವು ಅಂಶಗಳ ಮೂಲಕ ಆತ ಹುಚ್ಚನಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಡಲಾಗಿತ್ತು. ನ್ಯಾಯಾಲಯ ಕೂಡಾ ಅಮಾನುಲ್ಲಾ ಹುಚ್ಚನಲ್ಲ ಎಂದು ಅಭಿಪ್ರಾಯಕ್ಕೆ ಬಂದು ಶಿಕ್ಷೆ ನೀಡಿದೆ
