Maja Talkies : ಕನ್ನಡದ ಅತ್ಯಂತ ಜನಪ್ರಿಯ ಕಾಮಿಡಿ ಶೋಗಳಲ್ಲಿ ಮಜಾ ಟಾಕೀಸ್ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ. ಸುಮಾರು 600ಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಮುಗಿಸಿರುವ ಮಜಾ ಟಾಕೀಸ್ ಇದೀಗ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮನ ಗೆಲ್ಲಲು ಮತ್ತೆ ಬಂದಿದೆ. ಅಚ್ಚರಿಯೇನೆಂದರೆ ಈ ಬಾರಿ ಹಲವು ಹಳೆಯ ಮುಖಗಳು ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಳ್ಳದಿದ್ದದ್ದು. ಜೊತೆಗೆ ಅನೇಕ ಹೊಸ ಮುಖಗಳು, ಹೊಸ ಪ್ರತಿಭೆಗಳು ಈ ಬಾರಿಯ ಶೋನಲ್ಲಿ ಅನಾವರಣಗೊಂಡಿರುವುದು.
ಹೌದು ಈ ಬಾರಿಯ ಶೋನ್ನಲ್ಲಿ ಮೊದಲು ಮಜಾ ಟಾಕೀಸ್ ನಲ್ಲಿ ಇದ್ದಂತಹ ಇಂದ್ರಜಿತ್ ಲಂಕೇಶ್, ಶ್ವೇತ ಚಂಗಪ್ಪ, ರೆಮೋ ಹಾಗೂ ಮಂಡ್ಯ ರಮೇಶ್ ಅವರು ಭಾಗವಹಿಸಿಲ್ಲ. ಗಿಚ್ಚಗಿಲಿಗಿಲಿ ಶೋ ಹಾಗೂ ಅನೇಕ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಂತಹ ಹೊಸ ಪ್ರತಿಮೆಗಳು ಈ ಬಾರಿಯ ಮಜಾ ಟಾಕೀಸ್ ನಲ್ಲಿ ಕಾಣಿಸಿದ್ದಾರೆ. ಈ ನಡುವೆ ಇಂದ್ರಜಿತ್ ಲಂಕೇಶ್ ಅವರು ತಾನೇ ಈ ಸೀಸನ್ ನಲ್ಲಿ ಭಾಗವಹಿಸಲಿಲ್ಲ ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದಾರೆ.
ಇಂದ್ರಜಿತ್ ಲಂಕೇಶ್ ಏನಂದ್ರು?”
ಮಜಾ ಟಾಕೀಸ್ ಶೋಗೆ ಯಾಕೆ ಬರ್ತಿಲ್ಲ? ನೀವು ಯಾಕೆ ಬಿಟ್ರಿ? ನೀವಿದ್ರೆ ನಗು ಇರ್ತಿತ್ತು, ವಿಡಂಬನೆ ಇರ್ತಿತ್ತು ಅಂತ ಅನೇಕರು ಕೇಳುತ್ತಿದ್ದಾರೆ. ಹೌದು, ಆ ಶೋನಲ್ಲಿ ನಾನಿದ್ದೆ, ಮಂಡ್ಯ ರಮೇಶ್, ಶ್ವೇತಾ ಚೆಂಗಪ್ಪ, ಅಪರ್ಣಾ, ರೆಮೋ, ಸೃಜನ್ ಲೋಕೇಶ್ ಇದ್ದರು. 600 ಎಪಿಸೋಡ್ ಪ್ರಸಾರ ಆಯ್ತು. ನಂ ಒನ್ ಟಿಆರ್‌ಪಿ ಕೊಟ್ಟಿದ್ದ ಶೋ ಆಗಿತ್ತು. ಅದ್ಭುತವಾದ ಹಿಟ್ ಆಯ್ತು, ಮನೆ ಮನೆ ತಲುಪಿತು. ಈ ಯಶಸ್ಸಿನ ನಡುವೆ ನಾನು ಬ್ರೇಕ್ ತಗೊಂಡು ಎರಡು ಸಿನಿಮಾ ಮಾಡಿದೆ. ಆಗಲೇ ತುಂಬ ಕಷ್ಟ ಆಗ್ತಿತ್ತು. ಸಿನಿಮಾ ನಿರ್ದೇಶಕನಾಗಿ ಪ್ರತಿಯೊಂದು ಹಂತದಲ್ಲಿ ನಾನು ಉಪಸ್ಥಿತಿ ಇರಬೇಕಾಗುತ್ತದೆ” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿಕೆ ನೀಡಿದ್ದಾರೆ.
“ಸಿನಿಮಾ ನಿರ್ದೇಶಕ ಅಂದ್ಮೇಲೆ ಆಕ್ಷನ್ ಕಟ್ ಹೇಳಬೇಕು. ಆರು ವರ್ಷ ಬ್ರೇಕ್ ಇಲ್ಲದೆ ಮಾಡಿದಂತಹ ಕಾರ್ಯಕ್ರಮ ಅದು. ಈ ಬಾರಿಯ ಮಜಾ ಟಾಕೀಸ್ ಶೋಗೂ ನನ್ನ ಕರೆದರು, ಆದರೆ ನನಗೆ ಆಗುತ್ತಿಲ್ಲ. ನನ್ನ ಮಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾನೆ. ನಾನು ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಈಗಾಗಲೇ ಯಶಸ್ವಿ ಶೋ ಇದು. ಮತ್ತೆ ಈ ಯಶಸ್ಸು ಸೃಷ್ಟಿ ಆಗತ್ತೋ ಇಲ್ವೋ ಗೊತ್ತಿಲ್ಲ. ರೆಮೋ ಸಂಗೀತದಲ್ಲಿ ಬ್ಯುಸಿ ಇದ್ದಾರೆ, ಶ್ವೇತಾ ಚೆಂಗಪ್ಪ ಇನ್ನೊಂದು ಶೋನಲ್ಲಿ ಬ್ಯುಸಿ ಇದ್ದಾರೆ. ಮಂಡ್ಯ ರಮೇಶ್ ಅವರು ಧಾರಾವಾಹಿ ಜೊತೆಗೆ ರಂಗಭೂಮಿಯಲ್ಲಿ ಆಕ್ಟಿವ್ ಆಗಿದ್ದಾರೆ. ನಾನು ರಿಟೈರ್ ಆಗಿಲ್ಲ, ಆದರೆ ಸಿನಿಮಾ ನಿರ್ದೇಶನ ಮಾಡ್ತಿರೋದಿಕ್ಕೆ ಇದಕ್ಕೆ ಸಮಯ ಕೊಡೋಕೆ ಆಗ್ತಿಲ್ಲ” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.
