Bangalore: ಪಂಜಾಬಿನ ಪಟಿಯಾಲ ಬಳಿ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರುವ ವ್ಯವಸ್ಥೆಯನ್ನು ರಾಜ್ಯಸರಕಾರ ಮಾಡಿದೆ. ಬೆನ್ನು ಮೂಳೆಗೆ ಗಂಭೀರವಾಗಿ ಗಾಯಗೊಂಡ ಶಾಂತಕುಮಾರ್ ಅವರನ್ನು ಪಟಿಯಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈ ಸುದ್ದಿ ತಿಳಿದ ಸಿಎಂ ಸಿದ್ದರಾಮಯ್ಯ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕುರುಬೂರು ಶಾಂತಕುಮಾರ್ ಅವರು ಪಂಜಾಬ್‌ನಲ್ಲಿ ಆಯೋಜನೆ ಮಾಡಿದ್ದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೆಂದು ತೆರಳುತ್ತಿದ್ದ ಸಂದರ್ಭ ಭಾರೀ ಅವಘಡ ಸಂಭವಿಸಿತ್ತು. ದೆಹಲಿಯಿಂದ ಪಂಜಾಬ್ ಕಡೆ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ. ಎಡಗೈ, ಎಡ ಕಾಲು, ಸ್ಪೈನಲ್ ಕಾರ್ಡ್‌ಗೂ ಗಂಭೀರ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ಎಸ್ಕಾರ್ಟ್ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುಂದಿನ ವಾಹನ ಅಪಘಾತಕ್ಕೀಡಾಗಿದ್ದು, ಹೀಗಾಗಿ ಶಾಂತಕುಮಾರ್ ಪ್ರಯಾಣ ಮಾಡುತ್ತಿದ್ದ ಕಾರು ಚಾಲಕ ಒಮ್ಮೆಲ್ಲೇ ಬ್ರೇಕ್ ಹಾಕಿದ್ದು, ಹಿಂದಿನಿಂದ ಬರುತ್ತಿದ್ದ ಐದಕ್ಕೂ ಹೆಚ್ಚು ಕಾರುಗಳು ಏಕಕಾಲದಲ್ಲಿ ಸರಣಿ ಅಪಘಾತಕ್ಕೆ ಉಂಟಾಗಿತ್ತು.
