7
Putturu : ಅಡಿಕೆ ಖರೀದಿಸಿ 2.76 ಕೋ.ರೂ. ನೀಡದೆ ವಂಚನೆ ಮಾಡಿರುವ ಆರೋಪ ಒಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.
ಮಂಗಳೂರು ಭಗವತೀನಗರ ಮಣ್ಣಗುಡ್ಡದಲ್ಲಿ ವಾಸವಾಗಿರುವ ಕಮಲ್ ಕಾಂತ್ ಶರ್ಮಾ ಬೆಟ್ಟಂಪಾಡಿಯಲ್ಲಿ ಪಾರಸ್ ಟ್ರೇಡರ್ಸ್ ಎಂಬ ಅಡಿಕೆ ಗಾರ್ಬಲ್ ನಡೆಸುತ್ತಿದ್ದು ಅಡಿಕೆ ವ್ಯವಹಾರವನ್ನು ಛತ್ತೀಸ್ಗಢದ ಲಲಿತ್ ಜೈನ್ ಮತ್ತು ಪ್ರೇಕ್ಷಾ ಜೈನ್ ಅವರ ಮಾಲಕತ್ವದ ಕಂಪೆನಿಯೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಲಲಿತ್ ಜೈನ್ ಮತ್ತು ಪ್ರೇಕ್ಷಾ ಜೈನ್ ಅವರು ಒಟ್ಟು ರೂ.2,76,00,300 ಬೆಲೆಯ ಅಡಿಕೆಯನ್ನು ಖರೀದಿಸಿಕೊಂಡು ಹಣವನ್ನು ನೀಡಿಲ್ಲ. ದೂರವಾಣಿ ಕರೆ ಮಾಡಿದಾಗ ಸ್ವೀಕರಿಸದೇ ಇದ್ದು, ಕೆಲವು ದಿನಗಳಿಂದ ಮೊಬೈಲ್ ಪೋನ್ ಸ್ವಿಚ್ ಆಪ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಬೆಟ್ಟಂಪಾಡಿಯ ಪಾರಸ್ ಟ್ರೇಡರ್ಸ್ ಮಾಲಕ ಕಮಲ್ ಕಾಂತ್ ಶರ್ಮಾ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
