Arrest: ಮದರಸಾದಲ್ಲಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇಲೆ ಮದರಸಾ ಮಾಲೀಕನ ಕಿರಿಯ ಪುತ್ರನನ್ನು ಕೊತ್ತನೂರು ಪೊಲೀಸರು ಬಂಧನ ಮಾಡಿದ್ದಾರೆ. ಮಹಮ್ಮದ್ ಹಸನ್ (19) ಬಂಧಿತ ಆರೋಪಿ.
ಥಣಿಸಂದ್ರ ಮುಖ್ಯರಸ್ತೆಯ ಮದರಸಾದಲ್ಲಿ ಓದುವ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿ ಅನುಚಿತ ವರ್ತನೆಯನ್ನು ಹಸನ್ ಮಾಡಿದ್ದ. ಈ ಕುರಿತ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಥಣಿಸಂದ್ರ ಮುಖ್ಯರಸ್ತೆಯಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಸನ್ ತಂದೆ ಮದರಸಾವನ್ನು ಮೂರು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಹಿರಿಯ ಪುತ್ರ ಪ್ರಾಂಶುಪಾಲನಾಗಿದ್ದಾನೆ. ಕಿರಿಯ ಪುತ್ರ ಆಗಾಗ್ಗೆ ಭೇಟಿ ನೀಡುತ್ತಿದ್ದ. ಪಾಠ ಮಾಡುವ ನೆಪದಲ್ಲಿ ಬಂದು ಬಾಲಕಿಯರಿಗೆ ಸುಖಾಸುಮ್ಮನೆ ಹಲ್ಲೆ ಮಾಡಿ ಕಿರುಕುಳ ನೀಡುತ್ತಿರುವ ಆರೋಪ ಕಿರಿಯ ಪುತ್ರ ಹಸನ್ ಮೇಲೆ ಇದೆ.
ಹಸನ್‌ನಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ತನ್ನ ಪಾಲಕರಲ್ಲಿ ಈ ಕುರಿತು ಹೇಳಿ ಕಣ್ಣೀರಿಟ್ಟಿದ್ದಾಳೆ. ಇದರಿಂದ ಕೋಪಗೊಂಡ ಪಾಲಕರು ಮದರಸಾಗೆ ತೆರಳಿ ಅಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದಾಗ ಹಸನ್ ಗೂಂಡಾವರ್ತನೆ ಬೆಳಕಿಗೆ ಬಂದಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದರು. ಇದನ್ನು ಆಯುಕ್ತ ಬಿ.ದಯಾನಂದ್ ತನಿಖೆಗೆ ಸೂಚಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
