Puttur: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.26ರಂದು ಮಹಾಶಿವರಾತ್ರಿ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.
ಬೆಳಗ್ಗೆ 6 ರಿಂದ ಮಾರನೆ ದಿನ ಬೆಳಗ್ಗೆ 6ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ದೇವಳದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ದೇವಳದಲ್ಲಿ ಏಕಬಿಲ್ವಂ ಶಿವಾರ್ಪಣಂ ಕಾರ್ಯಕ್ರಮ ಭಕ್ತರಿಗೆ ಅವಕಾಶವಿದೆ. ಬೆಳಿಗ್ಗೆ 9ಕ್ಕೆ ಶತರುದ್ರಾಭಿಷೇಕ ಹಾಗು ರುದ್ರಯಾಗ ಆರಂಭಗೊಂಡು 11.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂಪರ್ತಣೆ ನಡೆಯಲಿದೆ. ರಾತ್ರಿ 7 ರ ನಂತರ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ಹೊರಾಂಗಣದಲ್ಲಿ ಉಡುಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ಕಂಡನಾಯಕನ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿದೆ. ಇದೆ ಸಂದರ್ಭ ಅಷ್ಟಾವಧಾನ ಸೇವೆ, ಪಲ್ಲಕ್ಕಿ ಉತ್ಸವ, ಸ್ಯಾಕ್ಟೋಪೋನ್ ವಾದನ, ಬ್ಯಾಂಡ್, ಭಜನೆ ಸುತ್ತು ನಡೆದು ಚಂದ್ರಮಂಡಲ ರಥೋತ್ಸವ ಜರುಗಲಿದೆ. ಬಳಿಕ ಕೆರೆ ಉತ್ಸವ ನಡೆದು ದೇವರು ಒಳಗಾದ ಬಳಿಕ ದೇವರಿಗೆ ಏಕಾದಶರುದ್ರಾಭಿಷೇಕ, ರಾತ್ರಿ ಪೂಜೆ, ನಡೆದು ದೇವರ ಭೂತಬಲಿ ಉತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.
