Jeevan Sathi: ಜೀವನ್ ಸಾಥಿ ವೆಬ್‌ಸೈಟ್ ಮೂಲಕ ಯುವತಿಗೆ ಪರಿಚಯವಾದ ಯುವಕನೋರ್ವ ಆಕೆಗೆ 60 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಶಿವಲಿಂಗೇಶ್ ಎಂಬ ಯುವಕ 2022 ರಲ್ಲಿ ಜೀವನ್ ಸಾಥಿ ವೆಬ್‌ಸೈಟ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡು ನಂತರ ಇಬ್ಬರೂ ಭೇಟಿಯಾಗಿ ಮದುವೆ ಮಾತುಕತೆ ಕೂಡಾ ನಡೆದಿತ್ತು. ಈ ಮಧ್ಯೆ ಈತ ತನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿ ಚಿಕಿತ್ಸೆಗೆ ತಕ್ಷಣ ಹಣದ ಅಗತ್ಯವಿದೆ ಎಂದು ಹೇಳಿ ನಾಟಕವಾಡಿದ್ದಾನೆ. ಯುವತಿ ಆತನಿಗೆ ಹಂತ ಹಂತವಾಗಿ 60 ಲಕ್ಷ ರೂ. ನೀಡಿದ್ದಾಳೆ.
ಹಣ ಪಡೆದ ವ್ಯಕ್ತಿಯ ಅನಂತರ ಸುಳಿವಿಲ್ಲ. ಯುವತಿಗೆ ಅನುಮಾನ ಬಂದಿದ್ದು, ಪರಿಶೀಲನೆ ಮಾಡಿದಾಗ ಈತ ಇದೇ ರೀತಿ ಅನೇಕ ಮಂದಿಗೆ ಮೋಸ ಮಾಡಿರುವುದು ತಿಳಿದು ಬಂದಿದೆ. ಕ್ಯಾಸಿನೋದಲ್ಲಿ ಹಣ ಹೂಡಿಕೆ ಮಾಡುವ ಗೀಳು ಹೊಂದಿದ್ದ ಆರೋಪಿ ಶಿವಲಿಂಗೇಶ್ ಈ ಕಾರಣಕ್ಕೆ ಸುಳ್ಳು ಹೇಳಿ ಹಲವರ ಬಳಿ ಹಣ ಪಡೆಯುತ್ತಿದ್ದ. ಈ ಕುರಿತು ಆತನ ಕುಟುಂಬದವರು ಪೋಸ್ಟ್ ಹಾಕಿದ್ದು, ಶಿವಲಿಂಗೇಶ್ ಬಗ್ಗೆ ವಿವರಿಸಿದ್ದಾರೆ. ಯಾರೂ ಆತನಿಗೆ ಹಣ ಕೊಡಬೇಡಿ ಎಂದು ಪೋಸ್ಟ್ ಹಾಕಿದ್ದಾರೆ.
ವಂಚನೆಗೊಳಗಾದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
