BJP: ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ದೊಡ್ಡದಾಗಿ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕ ಯತ್ನಾಳ್ ಹಾಗೂ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಬಣಗಳು ಅಧ್ಯಕ್ಷ ಗಾದಿಗೆ ಕಣ್ಣಿಟ್ಟಿದ್ದು ಆರೋಪ, ಪ್ರತ್ಯಾರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಹೈಕಮಾಂಡ್ ಎಂಟ್ರಿಯಾದರೂ ಕೂಡ ರಾಜ್ಯದ ರೆಬೆಲ್ ಬಿಜೆಪಿ ನಾಯಕರು ಸುಮ್ಮನಾದಂತೆ ಕಾಣುತ್ತಿಲ್ಲ. ಈ ನಡುವೆಯೇ ಲಿಂಗಾಯಿತ ನಾಯಕರಿಗೆ ಬಿಜೆಪಿ ಅಧ್ಯಕ್ಷ ಪಟ್ಟ ಕಟ್ಟಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಇಬ್ಬರು ನಾಯಕರ ಹೆಸರು ಕೂಡ ಫೈನಲ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ಯತ್ನಾಳ್ ಮತ್ತು ವಿಜಯೇಂದ್ರ ಅವರ ಬಣಗಳ ನಡುವೆ ಅಧ್ಯಕ್ಷ ಪಟ್ಟಕ್ಕೆ ಕಿತ್ತಾಟ ನಡೆಯುತ್ತಿರುವ ವೇಳೆಯೇ ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಇಬ್ಬರು ಹಿರಿಯ ನಾಯಕರ ಹೆಸರು ಕೇಳಿಬಂದಿದೆ. ಸದ್ಯ ಲಿಂಗಾಯಿತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಕೊಡುವುದು ಒಳಿತು ಎಂಬ ಮಾತು ಕೇಳಿಬಂದ ಹಿನ್ನೆಲೆ ಲಿಂಗಾತಯ ಅಸ್ತ್ರವನ್ನೇ ಪ್ರಯೋಗಿಸಲು ತಯಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣ ಅಥವಾ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಭಾರಿ ಚರ್ಚೆಯಾಗಿದೆ. ಸದ್ಯ ಹಾಲಿ ಅಧ್ಯಕ್ಷರಾಗಿರುವ ವಿಜಯೇಂದ್ರ ಅವರು ಲಿಂಗಾಯತ ಸಮುದಾಯದವರು. ಇದೀಗ ಅಧ್ಯಕ್ಷರ ಬದಲಾವಣೆ ಸಂದರ್ಭದಲ್ಲಿ ವಿಜಯೇಂದ್ರ ಅವರಿಂದ ಪಟ್ಟವನ್ನು ಕಿತ್ತುಕೊಂಡು ಬೇರೆ ಸಮುದಾಯದ ನಾಯಕನಿಗೆ ಅಧ್ಯಕ್ಷ ಪಟ್ಟ ಕಟ್ಟಿದರೆ ಪಕ್ಷ ಸಂಘಟನೆಯಲ್ಲಿ ಅಲ್ಲೋಲಕಲ್ಲೋಲ ವಾಗುವುದು ಪಕ್ಕ. ಹಾಗಾಗಿ ವಿಜಯೇಂದ್ರ ಬದಲಿದೆ ಲಿಂಗಾಯತ ಸಮುದಾಯದ ಈ ನಾಯಕರಲ್ಲಿ ಒಬ್ಬರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಯಾವುದೇ ಅಸಮಾಧಾನ ಇರುವುದಿಲ್ಲ ಎಂಬ ವಿಚಾರವನ್ನೂ ಹೈಕಮಾಂಡ್‌ಗೆ ಮನವರಿಕೆ ಮಾಡಲಿದ್ದಾರೆ ಎನ್ನಲಾಗಿದೆ.
