Bangalore: ಹಲ್ಲೆ ಪ್ರಕರಣ ಸಂಬಂಧ ಪಟ್ಟಂತೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಬಗ್ಗೆ ಚರ್ಚೆ ವೇಳೆ ಬಿಜೆಪಿಯ ವೇದವ್ಯಾಸ ಕಾಮತ್ ಮಾತನಾಡಿದ್ದು, ನಾನು ಹಲ್ಲೆ ಮಾಡಿರುವುದು ನಿಜವಾಗಿದ್ದರೆ ಸದನದಲ್ಲಿ ಒಂದು ಕ್ಷಣವೂ ಇರುವುದಿಲ್ಲ ಎಂದು ಗದ್ಗದಿತರಾಗಿ ಹೇಳಿರುವ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಗಿದೆ.
ಪ್ರತಿಪಕ್ಷ ನಾಯಕ ಅರವಿಂದ ಬೆಲ್ಲದ್ ಶೂನ್ಯವೇಳೆಯಡಿ ವಿಷಯವನ್ನು ಪ್ರಸ್ತಾಪಿಸಿದ್ದು, ಎಫ್‌ಐಆರ್ ದಾಖಲು ಮಾಡಿದ್ದಕ್ಕೆ ಆಕ್ಷೇಪಿಸಿದ ಕಾರಣ ತಿಳಿಸಲು ಸರಕಾರಕ್ಕೆ ಆಗ್ರಹ ಮಾಡಿದರು. ಯಾರದ್ದೋ ಮೇಲೆ ಹಲ್ಲೆಯಾಗಿದೆ ಎಂದು ಊಹೆಯ ಮೇಲೆ ಎಫ್‌ಐಆರ್ ದಾಖಲು ಸರಿಯಲ್ಲ ಎಂದು ವಿ.ಸುನಿಲ್‌ಕುಮಾರ್ ಹೇಳಿದ್ದಾರೆ. ಶಾಸಕರ ಮೇಲೂ ಮನಸೋ ಇಚ್ಛೆ ದಾವೆ ಹೂಡಲು ಇದೇನು ಗೂಂಡಾ ರಾಜ್ಯವೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಖಡಕ್ ಆಗಿ ಪ್ರಶ್ನೆ ಮಾಡಿದರು.
ಏನಾಗಿದೆ ಎಂದು ಗೊತ್ತಿಲ್ಲ. ಸಮಗ್ರ ಮಾಹಿತಿ ತರಿಸಿ ಉತ್ತರಿಸುವೆ. ಏನೂ ಇಲ್ಲದೆ ಪ್ರಕರಣ ದಾಖಲು ಮಾಡಿದರೆ ಕ್ರಮ ಕೈಗೊಳ್ಳುವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ಸ್ಪೀಕರ್ ಅನುಮತಿ ಮೇರೆಗೆ ಕಾಮತ್ ಅವರು ಅಂದು ನಡೆದ ಘಟನೆ ಹಿನ್ನೆಲೆ, ಅಲ್ಲಿ ಹಾಜರಿದ್ದ ಎಂಎಲ್‌ಸಿ ಮುಂಚಿತವಾಗಿ ಹೋಗಿದ್ದನ್ನೆಲ್ಲ ವಿವರಿಸಿದರು. ಈ ವೇಳೆ ಘೇರಾವ್‌ಗೆ ಸ್ವಲ್ಪ ಹೊತ್ತು ಮುಂಚೆ ನನ್ನ ವಿರುದ್ಧ ಮಾತ್ರ ಎಫ್‌ಐಆರ್ ದಾಖಲು ಮಾಡಿದ್ದರ ಔಚಿತ್ಯವೇನು ಎಂದು ಕೇಳಿದರು. ಶಾಸಕ ಹರೀಶ್ ಪೂಂಜಾ ಸೇರಿ ಬಿಜೆಪಿ ಶಾಸಕರ ವಿರುದ್ಧವೇ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಪ್ರತಿಪಕ್ಷ ಶಾಸಕರನ್ನು ದಮನ ಮಾಡುವ ನೀತಿ ಇದು ಎಂದು ಪ್ರತಿಪಕ್ಷ ಕಿಡಿಕಾರಿದೆ.
