Mangaluru: ಹಿಂದೂ ಯುವತಿಯ ಜೊತೆಗಿದ್ದ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನನ್ನು ಕಾರಿನಿಂದ ಎಳೆದು ಹಲ್ಲೆ ಮಾಡಿದ್ದಲ್ಲದೆ, ಕಂಬಕ್ಕೆ ಕಟ್ಟಿ ಅರೆ ಬೆತ್ತಲೆಗೊಳಿಸಿ ವಿಡಿಯೋ ಮಾಡಿದ್ದ ಪ್ರಕರಣದ ಘಟನೆ 2015ರ ಆಗಸ್ಟ್ 28ರಂದು ನಡೆದಿತ್ತು. ಈ ಪ್ರಕರಣದಲ್ಲಿ 19 ಜನ ಆರೋಪಿಗಳನ್ನು ಖುಲಾಸೆ ಮಾಡಿ ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪನ್ನು ನೀಡಿದೆ.
ಅತ್ತಾವರದ ಈಝೀ ಡೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳೊಂದಿಗೆ ಆ ಮಳಿಗೆಯ ವ್ಯವಸ್ಥಾಪಕ ಶಾಕೀರ್ ಎಂಬಾತ ಕಾರಿನಲ್ಲಿ ಹೋಗುತ್ತಿದ್ದಾಗ, ಅತ್ತಾವರ ನಂದಿಗುಡ್ಡೆ ಬಳಿ ಹಿಂದೂ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ನಂತರ ಕಾರಿನಲ್ಲಿದ್ದ ಹಿಂದೂ ಯುವತಿಯನ್ನು ಕರೆದೊಯ್ಯುತ್ತಿದ್ದಾನೆಂದು ಆರೋಪ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು.
ಸಹೋದ್ಯೋಗಿಯಾಗಿದ್ದ ಯುವತಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಯುವತಿ ಎರಡು ಸಾವಿರ ಹಣ ಬೇಕೆಂದು ಕೇಳಿದ್ದಕ್ಕೆ ಶಾಕೀರ್ ಅತ್ತಾವರ ಕೆಎಂಸಿ ಆಸ್ಪತ್ರೆಯ ಬಳಿ ತೆರಳಿ ಹಣ ಕೊಡುತ್ತಿದ್ದಾಗಲೇ ನಾಲ್ಕು ಬೈಕಿನಲ್ಲಿ ಬಂದಿದ್ದ ಯುವಕರು ಕಾರಿಗೆ ಅಡ್ಡ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಕಾರಿನಿಂದ ಎಳೆದು ಹಾಕಿ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ನಂತರ ಎಟಿಎಂ ಕಾರ್ಡ್, ಎರಡು ಸಾವಿರ ನಗದು, ಮೊಬೈಲನ್ನು ಕಿತ್ತುಕೊಂಡಿದ್ದರು ಎನ್ನುವುದಾಗಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ 78 ದಾಖಲೆ, 33 ಸಾಕ್ಷಿಗಳನ್ನು ಹಾರು ಪಡಿಸಲಾಗಿತ್ತು. ಪೊಲೀಸರಿಗೆ ಆರೋಪ ಸಾಬೀತು ಪಡಿಸಲು ಸಾಧ್ಯವಾಗದೇ 19 ಜನ ಆರೋಪಿಗಳನ್ನು ಖುಲಾಸೆಗೊಳಿಸಿ ಮಾ.15 ರಂದು ತೀರ್ಪು ನೀಡಿದ್ದಾರೆ.
