Bengaluru : ರಾಮ ಭಕ್ತೆ ಮೀನಾಕ್ಷಿ ಶ್ರೀನಿವಾಸ್ ಎಂಬುವವರು ಬೆಂಗಳೂರಿನಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಆಯೋಜಿಸಿ ಕೋಮು ಸೌಹಾರ್ದತೆಯನ್ನು ಮೆರೆದಂತಹ ಒಂದು ಅಪರೂಪದ ಘಟನೆ ನಡೆದಿದೆ.
ಬೆಂಗಳೂರಿನ(Bengaluru) ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆಶೀರ್ವಾದ್ ಸಭಾಂಗಣದಲ್ಲಿ ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷ ಭಾಷಣಗಳಿಗೆ ವಿರುದ್ಧವಾಗಿ ತಮಿಳುನಾಡು ಮೂಲದ ಮೀನಾಕ್ಷಿ ಅಮ್ಮನ ಕುಟುಂಬ ಮೂರನೇ ಬಾರಿಗೆ ಬೆಂಗಳೂರಿನಲ್ಲಿ ‘ಅಮ್ಮನ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಮರು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಮಂದಿಯೂ ಭಾಗವಹಿಸಿ ನಾವೆಲ್ಲರೂ ಒಂದೇ ಎಂಬುದನ್ನು ಸಾರಿದರು.
ಇದು ನಮ್ಮ ಕುಟುಂಬ ಮುಸ್ಲಿಮ್ ಸಹೋದರ-ಸಹೋದರರಿಗಾಗಿ ಮೂರನೇ ಬಾರಿ ಆಯೋಜಿಸಿರುವ ಇಫ್ತಾರ್ ಕೂಟ. ನಮ್ಮ ದೇಶದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಪ್ರತಿದಿನವೂ ದ್ವೇಷ ಹುಟ್ಟಿಸುವಂತಹ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಆದರೆ, ನಾವೆಲ್ಲರೂ ಮನುಷ್ಯರು. ಪರಸ್ಪರ ಪ್ರೀತಿಯಿಂದ ಬಾಳಿ-ಬದುಕಿ ಈ ದೇಶವನ್ನು ಕಟ್ಟಬೇಕು. ಸಮಾಜದಲ್ಲಿ ದ್ವೇಷ ಹುಟ್ಟಿಸುವ ಮಂದಿ ಕಡಿಮೆ ಇದ್ದರೂ ಅದರ ಪರಿಣಾಮ ದೊಡ್ಡದಾಗಿದೆ. ಹಾಗಾಗಿ, ನಾವೆಲ್ಲರೂ ಒಗ್ಗಟ್ಟಿನಲ್ಲಿ ಸಾಗಬೇಕು. ಸಮಾಜದಲ್ಲಿ ಪ್ರೀತಿ ಹರಡುವವರಾಗಬೇಕು” ಎಂದು ಕರೆ ನೀಡಿದರು.
