Udupi: ನೇಜಾರಿನ ತಾಯಿ, ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವೀಡಿಯೋವನ್ನು ದಾಖಲಿಸಬೇಕೆಂಬ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ್ದ ಅರ್ಜಿಯನ್ನು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.
ಈ ನಡುವೆ, ಆರೋಪಿಯು ತನ್ನ ಕೃತ್ಯಕ್ಕೆ ಬಳಸಿದ್ದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡಬೇಕೆಂಬ ಬ್ಯಾಂಕ್‌ನವರ ಅರ್ಜಿ ಕುರಿತ ಅಂತಿಮ ಆದೇಶವನ್ನು ವಿಚಾರಣೆ ಮುಗಿಯುವವರೆಗೆ ನ್ಯಾಯಾಲಯ ಕಾದಿರಿಸಿದೆ.
ಒಂದು ವೇಳೆ ಕಾರನ್ನು ಬ್ಯಾಂಕ್‌ನವರಿಗೆ ನೀಡಿದರೆ, ಮುಂದೆ ಅವರು ಅದನ್ನು ಮಾರಾಟ ಮಾಡಿದರೆ ಸಾಕ್ಷ್ಯ ವಿಚಾರಣೆಗೆ ತೊಂದರೆ ಆಗುತ್ತದೆ ಎಂದು ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು.
ಮುಂದಿನ ವಿಚಾರಣೆಯನ್ನು ಏಪ್ರಿಲ್ 3 ಕ್ಕೆ ನಿಗದಿಪಡಿಸಿ ನ್ಯಾಯಾಧೀಶ ಸಮೀವುಲ್ಲಾ ಆದೇಶ ನೀಡಿದ್ದು, ಅಂದು ಸಾಕ್ಷ್ಯಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು. ಬೆಂಗಳೂರು ಜೈಲಿನಲ್ಲಿರುವ ಆರೋಪಿಯನ್ನು ವೀಡಿಯೋ ಕಾಂಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ವಿಚಾರಣೆ ಮಾಡಲಾಯಿತು.
