Mother death: ಅಪಘಾತದಿಂದ ಮೃತಪಟ್ಟ ಮಗನ(Son) ಸಾವಿನ ಸುದ್ದಿ ತಿಳಿದು ಆಘಾತಗೊಂಡು ಕೋಮಾಕ್ಕೆ ತೆರಳಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಾ.26 ರ ಬುಧವಾರ ಉಡುಪಿಯ(Udupi) ಶಿರ್ವ ಕೊಲ್ಲಬೆಟ್ಟು ಬಳಿ ನಡೆದಿದೆ.
ಶಿರ್ವ ಕೊಲ್ಲಬೆಟ್ಟು ಬಳಿಯ ನಿವಾಸಿ ರಮೇಶ್ ಮೂಲ್ಯ (51)ಮೃತಪಟ್ಟ ಬೈಕ್ ಸವಾರ, ಪುತ್ರನ ಸಾವಿನ ಶೋಕದಿಂದ ಸಾವನ್ನಪ್ಪಿದ ಇಂದಿರಾ ಮೂಲ್ಯ (74) ಮೃತರ ತಾಯಿ, ರಮೇಶ್ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮಾ.23 ರಂದು ಬಂಟಕಲ್ಲಿನಿಂದ ಬಿ ಸಿ ರೋಡ್ ಪಾಂಬೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಪಾಂಬೂರು ಬಳಿ ಢಿಕ್ಕಿ ಹೊಡೆದು ಬೈಕ್ ಸವಾರ ನಿವಾಸಿ ರಮೇಶ್ ಮೂಲ್ಯ ತೀವ್ರ ಗಾಯಗೊಂಡು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಾ. 24 ರಂದು ರಾತ್ರಿ ಮೃತಪಟ್ಟಿದ್ದರು. ಅಪಘಾತದಿಂದ ಮೃತಪಟ್ಟ ರಮೇಶ್ ಅವರ ಮೃತ ದೇಹವನ್ನು ಅವರ ಅಂತಿಮ ಸಂಸ್ಕಾರಕ್ಕಾಗಿ ಮಂಗಳವಾರ ಶಿರ್ವ ಕೊಲ್ಲಬೆಟ್ಟುವಿನ ಮನೆಗೆ ತರಲಾಗಿತ್ತು. ಪುತ್ರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡ ತಾಯಿ ಇಂದಿರಾ ಮೂಲ್ಯ (74) ತೀವ್ರ ಅಸ್ವಸ್ಥರಾಗಿ ಕೋಮಾಕ್ಕೆ ತೆರಳಿದ್ದು, ಮಂಗಳವಾರ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಇಂದಿರಾ ಮೂಲ್ಯ ಅವರು ಮೃತಪಟ್ಟಿದ್ದಾರೆ. ದಿನದ ಅಂತರದಲ್ಲಿ ತಾಯಿ- ಮಗ ಇಬ್ಬರೂ ಮೃತಪಟ್ಟಿದ್ದು, ಮೃತರ ಕುಟುಂಬ ತೀವ್ರ ಆಘಾತಗೊಂಡಿದೆ.
